×
Ad

ಬಿಹಾರ | ಮತದಾರರ ಪಟ್ಟಿಯಿಂದ ಬಡವರು, ದಮನಿತರನ್ನು ಹೊರಗಿಡಲು ಉದ್ದೇಶಪೂರ್ವಕ ಪ್ರಯತ್ನ: ಖರ್ಗೆ

Update: 2025-08-02 20:41 IST

ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ, ಆ. 2: ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಅವಧಿಯಲ್ಲಿ ಬಿಡುಗಡೆ ಮಾಡಲಾಗಿರುವ ಕರಡು ಮತದಾರರ ಪಟ್ಟಿಯು ಬಡವರು, ತುಳಿತಕ್ಕೊಳಗಾದವರು ಮತ್ತು ಅಲ್ಪಸಂಖ್ಯಾತರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಉದ್ದೇಶಪೂರ್ವಕ ನಡೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.

‘‘ಏಳು ಕೋಟಿ ಮತದಾರರಿರುವ ರಾಜ್ಯವೊಂದರಲ್ಲಿ 65 ಲಕ್ಷದಿಂದ ಒಂದು ಕೋಟಿ ಮತದಾರರನ್ನು ಹೊರಗಿಟ್ಟರೆ, ಅದು ತಪ್ಪು. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ದಮನಿತರನ್ನು ಹೊರಗಿಡುವುದಕ್ಕಾಗಿ ತೆಗೆದುಕೊಂಡಿರುವ ಲೆಕ್ಕಾಚಾರದ ನಿರ್ಧಾರವಾಗಿದೆ’’ ಎಂದು ಕಾಂಗ್ರೆಸ್‌ನ ವಾರ್ಷಿಕ ಕಾನೂನು ಸಮಾವೇಶದಲ್ಲಿ ಮಾತನಾಡಿದ ಖರ್ಗೆ ಹೇಳಿದರು.

ಇದರ ಉತ್ತರದಾಯಿತ್ವವನ್ನು ಚುನಾವಣಾ ಆಯೋಗದಲ್ಲಿ ಇರುವವರು ಹೊರಲೇಬೇಕಾಗುತ್ತದೆ ಎಂದು ಖರ್ಗೆ ಹೇಳಿದರು.

‘‘ಚುನಾವಣಾ ಆಯೋಗದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದರೆ, ಅವರು ಸೇವೆಯಲ್ಲಿರಲಿ, ನಿವೃತ್ತರಾಗಿರಲಿ ಅವರನ್ನು ಬಿಡುವುದಿಲ್ಲ. ಅವರು ಈಗ ಅಪಾಯಕಾರಿ ಪರಿಸ್ಥಿತಿಯೊಂದರಲ್ಲಿ ಸಿಲುಕಿದ್ದಾರೆ. ಅವರು ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ. ಹೀಗೆ ಅವರು ನಿರಂತರವಾಗಿ ಮಾಡಿಕೊಂಡು ಹೋಗಲು ಸಾಧ್ಯವಿಲ್ಲ’’ ಎಂದರು.

ವಿಶೇಷ ತೀವ್ರ ಪರಿಷ್ಕರಣೆಯ ವೇಳೆ ಮತದಾರರ ಪರಿಶೀಲನೆಗೆ ಆಧಾರ್, ಮತದಾರ ಗರುತು ಚೀಟಿ ಅಥವಾ ಪಡಿತರ ಚೀಟಿಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ, ಚುನಾವಣಾ ಆಯೋಗವು ಅದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

‘‘ಹೆಚ್ಚು ಜನರನ್ನು ಮತದಾರರ ಪಟ್ಟಿಗೆ ಸೇರಿಸಿದರೆ, ಮತಗಳು ಕಾಂಗ್ರೆಸ್‌ಗೆ ಹೋಗುತ್ತವೆ ಎನ್ನುವುದು ಅವರಿಗೆ ಗೊತ್ತಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News