ಬಿಜೆಪಿ–ಆರೆಸ್ಸೆಸ್ ಸಂವಿಧಾನದ ಗೌರವಕ್ಕೆ ಧಕ್ಕೆ ತರುತ್ತಿವೆ; ಅವರದು ಕೇವಲ ಪ್ರದರ್ಶನದ ನಿಷ್ಠೆ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ: ಬಿಜೆಪಿ ಮತ್ತು ಆರೆಸ್ಸೆಸ್ ದೇಶದ ಸಂವಿಧಾನವನ್ನು ದುರ್ಬಲಗೊಳಿಸಿ, ಅದರ ಮೂಲ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಮೇಲೆ ಅವರು ತೋರ್ಪಡಿಕೆಯ ಗೌರವ ಕೇವಲ ರಾಜಕೀಯ ನಟನೆಯಷ್ಟೇ ಎಂದು ಅವರು ಆರೋಪಿಸಿದ್ದಾರೆ.
ಬುಧವಾರ ‘ಎಕ್ಸ್’ ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಖರ್ಗೆ, “ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಜಾತ್ಯತೀತತೆ — ಇವು ಭಾರತೀಯ ಸಂವಿಧಾನದ ಆತ್ಮ. ಆದರೆ ಇಂದು ಬಿಜೆಪಿ ಆಡಳಿತದಲ್ಲಿ ಈ ಮೌಲ್ಯಗಳೇ ಅಪಾಯದಲ್ಲಿವೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ವಸಾಹತುಶಾಹಿಯ ಅಪಾಯಗಳನ್ನು ಕುರಿತು ಮಾತನಾಡುತ್ತಿದ್ದರೂ, ಅವರ ಪರಂಪರೆಯ ಸಂಘಟನೆಗಳು ಸ್ವಾತಂತ್ರ್ಯ ಹೋರಾಟದ ವೇಳೆ ಜನರೊಂದಿಗೆ ನಿಲ್ಲಲಿಲ್ಲ; ಬದಲಾಗಿ ಬ್ರಿಟಿಷರ ಪರವಾಗಿ ಕೆಲಸ ಮಾಡಿವೆ ಎಂದು ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ನಿಮಿಷವೂ ಪಾಲ್ಗೊಳ್ಳದವರು, ಇಂದು ಸಂವಿಧಾನದ ರಕ್ಷಕರಂತೆ ಮಾತಾಡುತ್ತಿದ್ದಾರೆ” ಎಂದು ಅವರು ಹೇಳಿದರು.
ಖರ್ಗೆ, ಬಿಜೆಪಿ–ಆರೆಸ್ಸೆಸ್ ಡಿ.11, 1948ರಲ್ಲಿ ರಾಮ್ ಲೀಲಾ ಮೈದಾನದಲ್ಲಿ ಸಂವಿಧಾನದ ಪ್ರತಿಗಳನ್ನು ಸುಟ್ಟಿದ್ದ ಹಳೆಯ ಘಟನೆಗಳನ್ನು ಉಲ್ಲೇಖಿಸಿ, “ಅದನ್ನೇ ವಿರೋಧಿಸಿದವರು ಇಂದು ಅಂಬೇಡ್ಕರ್ ಪ್ರತಿಮೆಗೆ ಹೂವು ಹಾಕಿ ಸಂವಿಧಾನ ಪ್ರೇಮಿಗಳಂತೆ ನಾಟಕ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಸಂವಿಧಾನ ಸಭೆಯೊಂದಿಗೆ ಸೇರಿ ದೇಶದ ಪ್ರಜಾಪ್ರಭುತ್ವ ಭವಿಷ್ಯವನ್ನು ಕಟ್ಟಿಕೊಟ್ಟರು. ಆದರೆ ಸಂವಿಧಾನ ಜಾರಿಗೆ ಬಂದಾಗಲೇ ಆರೆಸ್ಸೆಸ್ ಅದನ್ನು ‘ಪಾಶ್ಚಾತ್ಯ ಮೌಲ್ಯಗಳ ಪ್ರತಿಫಲ’ವೆಂದು ಕರೆಯಿತು ಮತ್ತು ಮನುಸ್ಮೃತಿಯನ್ನು ತಮ್ಮ ಆದರ್ಶವೆಂದು ಘೋಷಿಸಿತು ಎಂದು ಖರ್ಗೆ ಸ್ಮರಿಸಿದರು.
“ಒಮ್ಮೆ ಮನುಸ್ಮೃತಿಗೆ ಸಂವಿಧಾನಕ್ಕಿಂತ ಹೆಚ್ಚಿನ ಸ್ಥಾನ ನೀಡಿದವರು, ಇಂದು ರಾಜಕೀಯ ಸಲುವಾಗಿ ಅದನ್ನೇ ತಮ್ಮದೇ ಎಂದು ಹೇಳಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ” ಎಂದು ಅವರು ವ್ಯಂಗ್ಯವಾಡಿದರು.
“ಗಾಂಧೀಜಿ ಹತ್ಯೆಯ ಬಳಿಕ ಸರ್ದಾರ್ ಪಟೇಲ್ ಸ್ವತಃ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರು. ಇತಿಹಾಸವೇ ಅವರ ನಿಲುವನ್ನು ಸಾಬೀತುಪಡಿಸುತ್ತದೆ” ಎಂದು ಅವರು ಹೇಳಿದರು.
1949 ರಲ್ಲಿ ಆರೆಸ್ಸೆಸ್ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾದ ಗೋಲ್ವಾಲ್ಕರ್ ಅವರ ಲೇಖನದಲ್ಲಿ ಮನುಸ್ಮೃತಿ ಕಾನೂನುಗಳನ್ನು ಪ್ರಶಂಸಿಸಿದ ಅಂಶವನ್ನೂ ಖರ್ಗೆ ಉಲ್ಲೇಖಿಸಿದರು.
ಬಿಜೆಪಿ–ಆರೆಸ್ಸೆಸ್ ಸಂವಿಧಾನದ ನಿಜವಾದ ಅರ್ಥವನ್ನು ರಾಜಕೀಯ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವುದು ಜನರಿಗೂ ಸ್ಪಷ್ಟವಾಗಿದೆ ಎಂದು ಖರ್ಗೆ ಹೇಳಿದ್ದಾರೆ.