×
Ad

ಅಸ್ಸಾಮಿನ ಬಿಜೆಪಿ ಸರಕಾರದಿಂದ ಬಂಗಾಳದಲ್ಲಿ ಎನ್ ಆರ್ ಸಿ ಜಾರಿಗೆ ಪ್ರಯತ್ನ: ಮಮತಾ ಬ್ಯಾನರ್ಜಿ ಆರೋಪ

Update: 2025-07-08 21:02 IST

ಮಮತಾ ಬ್ಯಾನರ್ಜಿ | PC : PTI

ಕೋಲ್ಕತಾ: ಬಿಜೆಪಿ ನೇತೃತ್ವದ ಅಸ್ಸಾಂ ಸರಕಾರವು ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಟಿಎಂಸಿ ಅಧ್ಯಕ್ಷೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಂಗಳವಾರ ಆರೋಪಿಸಿದ್ದಾರೆ. ಬಿಜೆಪಿಯ ವಿಭಜಕ ಮತ್ತು ದಬ್ಬಾಳಿಕೆಯ ಕಾರ್ಯತಂತ್ರದ ವಿರುದ್ಧ ಒಗ್ಗೂಡುವಂತೆ ಅವರು ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ.

ಉತ್ತರ ಬಂಗಾಳದ ಕೂಚ್ಬೆಹಾರ್ ಜಿಲ್ಲೆಯ ದಿನಹಾಟಾ ನಿವಾಸಿ ಉತ್ತಮ ಕುಮಾರ ಬೃಜಬಾಸಿ ಅವರು ಮಾನ್ಯವಾದ ಎಲ್ಲ ಗುರುತಿನ ದಾಖಲೆಗಳನ್ನು ಒದಗಿಸಿದ್ದರೂ ‘ವಿದೇಶಿಯ/ಅಕ್ರಮ ವಲಸಿಗ’ ಎಂಬ ಶಂಕೆಯಿಂದ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಮತಾ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.

‘50 ವರ್ಷಗಳಿಂದಲೂ ಕೂಚ್ ಬೆಹಾರ್ ನ ದಿನಹಾಟಾದಲ್ಲಿ ವಾಸವಾಗಿರುವ ಕೋಚ್-ರಾಜಬನ್ಶಿ ಸಮುದಾಯಕ್ಕೆ ಸೇರಿದ ಉತ್ತಮ ಕುಮಾರ ಬೃಜಬಾಸಿ ಅವರಿಗೆ ಅಸ್ಸಾಮಿನ ವಿದೇಶಿಯರ ನ್ಯಾಯಾಧಿಕರಣವು ಎನ್ಆರ್ಸಿ ನೋಟಿಸ್ ಹೊರಡಿಸಿರುವುದು ನನಗೆ ಆಘಾತ ಮತ್ತು ತೀವ್ರ ಕಳವಳವನ್ನುಂಟು ಮಾಡಿದೆ ’ ಎಂದು ಮಮತಾ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಆರೋಪವನ್ನು ತಿರಸ್ಕರಿಸಿದ ಬಿಜೆಪಿ ನಾಯಕ ಜಗನ್ನಾಥ ಚಟ್ಟೋಪಾಧ್ಯಾಯ ಅವರು,ಅಸ್ಸಾಮಿನ ವಿದೇಶಿಯರ ನ್ಯಾಯಾಧಿಕರಣವೊಂದು ನೀಡಿದೆ ಎನ್ನಲಾಗಿರುವ ನೋಟಿಸ್ ಕುರಿತು ಮಮತಾ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅಸ್ಸಾಂ ಮುಖ್ಯಮಂತ್ರಿಗಳ ಕಚೇರಿಯು ಈಗಾಗಲೇ ಕೋಚ್-ರಾಜಬನ್ಶಿ ಸಮುದಾಯವನ್ನು ಎನ್ಆರ್ಸಿ ಪ್ರಕ್ರಿಯೆಯಿಂದ ಹೊರಗಿರಿಸಲು ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯ ಸಂಪುಟವು ಎನ್ಆರ್ಸಿಗೆ ಸಂಬಂಧಿಸಿದಂತೆ ಈ ಸಮುದಾಯದ ವಿರುದ್ಧ ಬಾಕಿಯಿರುವ ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ದೃಢ ನಿಲುವನ್ನು ತಳೆದಿದೆ ಎಂದು ಹೇಳಿದರು.

ಅಸ್ಸಾಮಿನ ಬಿಜೆಪಿ ಸರಕಾರವು ಬೃಜಬಾಸಿಗೆ ಎನ್ ಆರ್ ಸಿ ನೋಟಿಸ್ ಕಳುಹಿಸಿದೆ ಎಂದು ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದ ಟಿಎಂಸಿ ಸಂಸದ ಹಾಗೂ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮೀರುಲ್ ಇಸ್ಲಾಮ್ ಅವರು,ಬೃಜಬಾಸಿಯವರ ಹೆಸರು ಮೊದಲು 1966ರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿತ್ತು ಎಂದು ಹೇಳಿದ್ದರು. ಸಂಬಂಧಿಸಿದ ದಾಖಲೆಯನ್ನೂ ಅವರು ಪ್ರದರ್ಶಿಸಿದ್ದರು. ಹೀಗಿದ್ದರೂ ಅಸ್ಸಾಂ ಸರಕಾರ ಈ ವ್ಯಕ್ತಿಗೆ ಹೇಗೆ ನೋಟಿಸ್ ಕಳುಹಿಸಿದೆ ಎಂದು ಅವರು ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News