×
Ad

ಪ್ರಧಾನಿ ನಮ್ಮನ್ನು ‘ಕಳ್ಳರು’ ಎಂದು ಕರೆಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ: ಮಮತಾ ಬ್ಯಾನರ್ಜಿ

Update: 2025-08-26 20:52 IST

ಮಮತಾ ಬ್ಯಾನರ್ಜಿ | PC :  PTI 

ಬರ್ಧವಾನ್, ಆ. 26: ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು ‘ಕಳ್ಳರು’ ಎಂದು ಕರೆಯುತ್ತಾರೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಅವರ ಹುದ್ದೆಯನ್ನು ಗೌರವಿಸುವಂತೆ, ಅವರು ನನ್ನ ಹುದ್ದೆಯನ್ನು ಗೌರವಿಸಬೇಕು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.

ಜನರಿಗೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ ವಿತರಿಸಲು ಪೂರ್ವ ಬರ್ದಮಾನ್ ಜಿಲ್ಲೆಯ ಬರ್ಧಮಾನ್ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೋದಿ ಅವರ ಹೇಳಿಕೆ ಪಶ್ಚಿಮಬಂಗಾಳದ ಜನರಿಗೆ ಅವಮಾನ ಎಂದು ಹೇಳಿದ ಮಮತಾ ಬ್ಯಾನರ್ಜಿ, ಕೇಂದ್ರದಿಂದ ಬರಬೇಕಾದ ನಿಧಿಯನ್ನು ತಡೆ ಹಿಡಿದಿರುವುದಕ್ಕೆ ಕಿಡಿ ಕಾರಿದರು. ಅಲ್ಲದೆ ಇದು ರಾಜ್ಯದ ಬೊಕ್ಕಸದ ಮೇಲೆ ದೊಡ್ಡ ಹೊರೆ ಹೊರಿಸಿದೆ ಎಂದು ಹೇಳಿದರು.

‘‘ನಾನು ಪ್ರಧಾನಿ ಅವರ ಹುದ್ದೆಗೆ ಗೌರವ ನೀಡಿದಂತೆ, ಅವರು ನನ್ನ ಹುದ್ದೆಗೆ ಗೌರವ ನೀಡಬೇಕು. ಅವರು ಪಶ್ಚಿಮಬಂಗಾಳದ ಜನರನ್ನು ಕಳ್ಳರು ಎಂದು ಕರೆಯುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಭ್ರಷ್ಟಾಚಾರ ತಾಂಡವವಾಡುತ್ತಿರುವ ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರದ ತಥಾಕಥಿತ ‘ಡಬಲ್ ಎಂಜಿನ್’ ಬಿಜೆಪಿ ಸರಕಾರದ ಕುರಿತು ಅವರು ವಾಸ್ತವವಾಗಿ ಕುರುಡರಾಗಿದ್ದಾರೆ ಎಂದು ಬ್ಯಾನರ್ಜಿ ಪ್ರತಿಪಾದಿಸಿದರು.

ಚುನಾವಣೆ ಬಂದಾಗಲೆಲ್ಲ ಮೋದಿ ಅವರು ವಲಸೆ ಹಕ್ಕಿಯಂತೆ ಪಶ್ಚಿಮಬಂಗಾಳಕ್ಕೆ ಆಗಮಿಸುತ್ತಾರೆ ಎಂದು ಪ್ರತಿಪಾದಿಸಿದ ಮಮತಾ ಬ್ಯಾನರ್ಜಿ, ಕಲ್ಯಾಣ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರದ ನಿಧಿಯ ಬಳಕೆ ಕುರಿತು ಕೇಂದ್ರ ಸರಕಾರದ ಎಲ್ಲಾ ಪ್ರಶ್ನೆಗಳಿಗೆ ರಾಜ್ಯದ ಆಡಳಿತ ತೃಪ್ತಿಕರ ಉತ್ತರ ನೀಡಿದೆ ಎಂದು ಹೇಳಿದರು.

‘‘ನಾವು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಆದರೂ ನೀವು ನಿಧಿ ವಿತರಣೆಯನ್ನು ನಿಲ್ಲಿಸಿದ್ದೀರಿ ಹಾಗೂ ಪಶ್ಚಿಮಬಂಗಾಳವನ್ನು ಕಳ್ಳ ಎಂದು ಕರೆದಿದ್ದೀರಿ’’ ಎಂದು ಅವರು ಹೇಳಿದರು.

‘‘ಅವರು ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಲು ಪಶ್ಚಿಮ ಬಂಗಾಳಕ್ಕೆ ಕೇಂದ್ರದ 186 ತಂಡಗಳನ್ನು ಕಳುಹಿಸಿದ್ದಾರೆ. ಆದರೆ ಯಾವುದೇ ಅಕ್ರಮ ಪತ್ತೆಯಾಗಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಶೂನ್ಯ ಅಂಕ ಪಡೆದಿರುವುದನ್ನು ವಿದ್ಯಾರ್ಥಿಯೋರ್ವ ಒಪ್ಪಿಕೊಳ್ಳಲು ಹೇಗೆ ಸಾಧ್ಯ? ನಾವು ಈ ಅವಮಾನ ಸಹಿಸಲಾರೆವು ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಆಗಸ್ಟ್ 22ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘‘ಭ್ರಷ್ಟಾಚಾರ, ಅಪರಾಧ ಹಾಗೂ ಟಿಎಂಸಿ ಸಮಾನಾರ್ಥಕ’’ ಎಂದು ಪ್ರತಿಪಾದಿಸಿದ್ದರು.

‘‘ಪಶ್ಚಿಮಬಂಗಾಳಕ್ಕೆ ಕೇಂದ್ರ ಸರಕಾರ ಕಳುಹಿಸಿದ ನಿಧಿ ಜನರಿಗೆ ತಲುಪಿಲ್ಲ. ಅದನ್ನು ಟಿಎಂಸಿ ಕಾರ್ಯಕರ್ತರು ತಿಂದು ಹಾಕಿದ್ದಾರೆ’’ ಎಂದು ಅವರು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News