×
Ad

"ರಾತ್ರಿ ವೇಳೆ ಹೆಣ್ಣುಮಕ್ಕಳನ್ನು ಹೊರಗೆ ಬಿಡಬಾರದು" : ಸಾಮೂಹಿಕ ಅತ್ಯಾಚಾರ ಘಟನೆ ಬಳಿಕ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ; ವ್ಯಾಪಕ ಟೀಕೆ

Update: 2025-10-12 16:25 IST

Photo|indiatoday

ಕೋಲ್ಕತ್ತಾ, ಅ. 12: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ರಾತ್ರಿ ವೇಳೆ ಹೆಣ್ಣುಮಕ್ಕಳನ್ನು ಹೊರಗೆ ಬಿಡಬಾರದು. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು,” ಎಂದು ಹೇಳಿದ್ದರು. ಈ ಹೇಳಿಕೆ ಮಹಿಳಾ ಹಕ್ಕು ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತರನ್ನೇ ಆರೋಪಿಸುವ ಮನೋಭಾವ ಎಂದು ಟೀಕಿಸಲಾಗಿದೆ.

ಮಮತಾ ಘಟನೆಯನ್ನು “ಆಘಾತಕಾರಿ” ಎಂದು ವರ್ಣಿಸುತ್ತಾ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. “ನಾವು ಇಂತಹ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆಯ ನಿಲುವು ಹೊಂದಿದ್ದೇವೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇತರರನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿದಿದೆ. ಯಾರನ್ನೂ ಕ್ಷಮಿಸುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಅತ್ಯಾಚಾರ ಪ್ರಕರಣಗಳಲ್ಲಿ ತಾನು ಮತ್ತು ತನ್ನ ಸರಕಾರವನ್ನು ಗುರಿಯಾಗಿಸುವ ಪ್ರಯತ್ನವನ್ನು ಮಮತಾ ಪ್ರಶ್ನಿಸಿದರು. “ಇದು ಖಾಸಗಿ ವೈದ್ಯಕೀಯ ಕಾಲೇಜಿನ ವ್ಯಾಪ್ತಿಯ ಘಟನೆ. ಪ್ರತೀ ಬಾರಿ ಸರಕಾರವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಕೆಲ ವಾರಗಳ ಹಿಂದೆ ಒಡಿಶಾದ ಪುರಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಲ್ಲಿ ಸರಕಾರದ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ?” ಎಂದು ಅವರು ಪ್ರಶ್ನಿಸಿದರು.

ಶುಕ್ರವಾರ ಸಂಜೆ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಹಿಂಭಾಗದ ಪ್ರದೇಶದಲ್ಲಿ 23 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಸಂತ್ರಸ್ತೆ ಒಡಿಶಾ ಮೂಲದವರು ಎನ್ನಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ಥೆಯ ತಂದೆ, “ನಮ್ಮ ಮಗಳು ಸುರಕ್ಷಿತಳಲ್ಲ ಎಂದು ನಮಗೆ ಭಾಸವಾಗಿದೆ. ಅವಳನ್ನು ಒಡಿಶಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಶಿಕ್ಷಣ ಮುಂದುವರಿಸುತ್ತೇವೆ,” ಎಂದು ANIಗೆ ತಿಳಿಸಿದರು.

ಪೊಲೀಸರು ಮೂವರನ್ನು ಬಂಧಿಸಿದ್ದು, ಮತ್ತೊಬ್ಬನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. “ಆರೋಪಿಗಳನ್ನು ಮೊಬೈಲ್ ಟವರ್ ಲೋಕೇಶನ್ ಆಧಾರದಲ್ಲಿ ಪತ್ತೆಹಚ್ಚಲಾಗಿದೆ. ಅಪರಾಧದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದೆ,” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News