×
Ad

ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಶಾಸಕನ ಸಹಚರರಿಂದ ಹಲ್ಲೆಗೊಳಗಾದ ಪ್ರಯಾಣಿಕ ದೂರು ನೀಡಿಲ್ಲ: ಸ್ಪಷ್ಟಪಡಿಸಿದ ರೈಲ್ವೆ ಪೊಲೀಸರು

Update: 2025-06-23 18:29 IST

PC : X 

ಉತ್ತರಪ್ರದೇಶ : ಹೊಸದಿಲ್ಲಿ- ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಆಸನಕ್ಕೆ ಸಂಬಂಧಿಸಿದ ವಿವಾದದಲ್ಲಿ ಬಿಜೆಪಿ ಶಾಸಕ ರಾಜೀವ್ ಸಿಂಗ್ ಪರಿಚಾ ಅವರ ಸಹಚರರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಪ್ರಯಾಣಿಕ ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಝಾನ್ಸಿ ಜಿಲ್ಲೆಯ ಬಬಿನಾ ವಿಧಾನಸಭಾ ಕ್ಷೇತ್ರದ ಶಾಸಕ ಪರಿಚಾ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ರಾಜ್ ಪ್ರಕಾಶ್ ಎಂದು ಗುರುತಿಸಲಾದ ಪ್ರಯಾಣಿಕನ ಹೇಳಿಕೆಯನ್ನು ದಾಖಲಿಸಲು ಪ್ರಯತ್ನಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ ಪ್ರಕಾಶ್ ಗಾಯಗೊಂಡಿದ್ದೇಗೆ ಮತ್ತು ಅವರು ದೂರು ದಾಖಲಿಸಲು ಬಯಸುತ್ತಾರೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಝಾನ್ಸಿ ರೈಲ್ವೆ ಎಸ್ಪಿ ವಿಪುಲ್ ಕುಮಾರ್ ಶ್ರೀವಾಸ್ತವ ಈ ಕುರಿತು ಪ್ರತಿಕ್ರಿಯಿಸಿ, ಪ್ರಕಾಶ್ ಅವರಿಗೆ ಯಾವುದೇ ದೂರು ನೀಡಿಲ್ಲ ಎಂದು ದೃಢಪಡಿಸಿದ್ದಾರೆ.

ʼಇಬ್ಬರು ಅಪರಿಚಿತ ಪ್ರಯಾಣಿಕರು ತಮ್ಮ ಕಾಲುಗಳನ್ನು ಚಾಚಿ ಕುಳಿತುಕೊಂಡು ಇತರರ ಚಲನೆಗೆ ಅಡ್ಡಿಯಾಗುವಂತೆ ತೊಂದರೆ ನೀಡುತ್ತಿದ್ದರು. ಈ ವೇಳೆ ಅವರನ್ನು ಪ್ರಶ್ನಿಸಿದಾಗ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದರುʼ ಎಂದು ಶಾಸಕರು ದೂರಿನಲ್ಲಿ ಆರೋಪಿಸಿದ್ದರು.

ಬಿಜೆಪಿ ಶಾಸಕರು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ತನ್ನ ಪತ್ನಿ ಮತ್ತು ಮಗನೊಂದಿಗೆ ದಿಲ್ಲಿಯಿಂದ ಝಾನ್ಸಿಗೆ ಹಿಂತಿರುಗುತ್ತಿದ್ದರು. ಅವರ ಎರಡು ಆಸನಗಳು ಪಕ್ಕದಲ್ಲಿದ್ದರೆ, ಮೂರನೆಯದು ದೂರದಲ್ಲಿತ್ತು. ಕುಟುಂಬವು ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಶಾಸಕರು ರಾಜ್ ಪ್ರಕಾಶ್ ಅವರಿಗೆ ತಮ್ಮ ಆಸನವನ್ನು ಬದಲಾಯಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆದರೆ ಪ್ರಕಾಶ್ ನಿರಾಕರಿಸಿದಾಗ, ಶಾಸಕರು ಟಿಕೆಟ್ ಪರೀಕ್ಷಕರನ್ನು ಸಂಪರ್ಕಿಸಿ ಮೂರು ಆಸನಗಳನ್ನು ಒಟ್ಟಿಗೆ ಕೇಳಿದರು. ಆದರೆ, ಪರೀಕ್ಷಕರು ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಶಾಸಕರು ಮತ್ತು ಪ್ರಕಾಶ್ ನಡುವೆ ವಾಗ್ವಾದ ನಡೆದಿದೆ. ರೈಲು ಝಾನ್ಸಿ ರೈಲು ನಿಲ್ದಾಣವನ್ನು ತಲುಪಿದಾಗ, ಅವರನ್ನು ಬರಮಾಡಿಕೊಳ್ಳಲು ಬಂದಿದ್ದ ಶಾಸಕರ ಸಹಚರರು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News