ಗುಜರಾತ್: ನಕಲಿ ಫುಟ್ಬಾಲ್ ಬೆಟ್ಟಿಂಗ್ ಆ್ಯಪ್ ಸೃಷ್ಟಿಸಿ ರೂ. 1400 ಕೋಟಿ ವಂಚನೆ
ಸಾಂದರ್ಭಿಕ ಚಿತ್ರ (Credit: freepik.com)
ನಕಲಿ ಫುಟ್ಬಾಲ್ ಬೆಟ್ಟಿಂಗ್ ಆ್ಯಪ್ ಸೃಷ್ಟಿಸಿದ ಚೀನಿ ವ್ಯಕ್ತಿಯೊಬ್ಬನನ್ನು ಒಳಗೊಂಡ ಗುಂಪು ಕೇವಲ ಒಂಬತ್ತು ದಿನಗಳಲ್ಲಿ 1200 ಮಂದಿಯಿಂದ 1400 ಕೋಟಿ ರೂಪಾಯಿ ವಂಚಿಸಿದ ಡಿಜಿಟಲ್ ಅಪರಾಧವನ್ನು ಗುಜರಾತ್ ಪೊಲೀಸರು ಭೇದಿಸಿದ್ದಾರೆ.
ಚೀನಾದ ಶೆನೆನ್ ಪ್ರಾಂತ್ಯದ ವೂ ಯುವಾಂಬೆ ಎಂಬಾತ ಈ ವಂಚನಾ ಜಾಲದ ಸೂತ್ರಧಾರ ಎನ್ನಲಾಗಿದೆ. ಈತ 2020 ರಿಂದ 2022ರ ಅವಧಿಯಲ್ಲಿ ಗುಜರಾತ್‍ನ ಪಠಾಣ್ ಹಾಗೂ ಬನಸ್ಕಾಂತ ಜಿಲ್ಲೆಗಳಲ್ಲಿ ವಾಸವಿದ್ದ ಈತ ಇಲ್ಲಿಂದಲೇ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಅಪರಾಧ ಪ್ರಕರಣದ ಸ್ವರೂಪದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸ್ ಇಲಾಖೆ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ‘Dani Data’ ಎಂಬ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಗುಜರಾತ್ ಹಾಗೂ ಉತ್ತರ ಪ್ರದೇಶದ ಜನತೆಗೆ ದೊಡ್ಡ ಪ್ರಮಾಣದಲ್ಲಿ ವಂಚಿಸಲಾಗಿದೆ ಎಂದು ಅಪರಾಧ ಪತ್ತೆ ಇಲಾಖೆ ಹೇಳಿದೆ.
ಈ ಬಗ್ಗೆ ಆಗ್ರಾ ಪೊಲೀಸರು ತನಿಖೆ ಕೈಗೊಂಡಾಗ ಈ ವಂಚನೆ ಜಾಲದಲ್ಲಿ ಉತ್ತರ ಗುಜರಾತ್‍ನ ಹಲವು ಮಂದಿ ಇದ್ದ ಅಂಶ ಪತ್ತೆಯಾಗಿದೆ. ಪಠಾಣ್ ಹಾಗೂ ಬನಸ್ಕಾಂತ ಜಿಲ್ಲೆಗಳಲ್ಲಿ ವಾಸವಿದ್ದ ಚೀನಿ ಪ್ರಜೆ ಸ್ಥಳೀಯರಿಗೆ ದೊಡ್ಡ ಮೊತ್ತದ ಸಂಪತ್ತು ಗಳಿಸಿಕೊಡುವ ಆಮಿಷ ಒಡ್ಡಿದ್ದ. ಗುಜರಾತ್‍ನಲ್ಲಿ ಸ್ಥಳೀಯರ ಸಹಕಾರದೊಂದಿಗೆ 2022ರ ಮೇ ತಿಂಗಳಲ್ಲಿ ಆ್ಯಪ್ ಬಿಡುಗಡೆ ಮಾಡಿದ್ದ. ಈ ಆ್ಯಪ್ ಮೂಲಕ ಬೆಟ್ಟಿಂಗ್ ಮಾಡಿ ಅಧಿಕ ಪ್ರತಿಫಲ ಪಡೆಯಬಹುದು ಎಂದು ನಂಬಿಕೆ ಹುಟ್ಟಿಸಿದ್ದ ಎಂದು ಸಿಐಡಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
15 ರಿಂದ 75 ವರ್ಷ ವಯಸ್ಸಿನ ಫುಟ್ಬಾಲ್ ಪ್ರೇಮಿಗಳನ್ನು ಈತ ವಂಚಿಸಿದ್ದು, ದಿನಕ್ಕೆ 200 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ವಂಚಿಸಿದ್ದಾನೆ ಎನ್ನಲಾಗಿದೆ.
ಆರಂಭದಲ್ಲಿ ಈ ಬೆಟ್ಟಿಂಗ್ ವ್ಯವಹಾರ ನಡೆಸಿದವರು ಆ್ಯಪ್ ಮೂಲಕ ತಮ್ಮ ಬಂಡವಾಳಕ್ಕೆ ಅನುಗುಣವಾಗಿ ಪ್ರತಿಫಲ ಪಡೆಯಲು ಸಾಧ್ಯವಾಗಿತ್ತು. ಆದರೆ ಒಂಬತ್ತು ದಿನಗಳ ಬಳಿಕ ಇದರ ಕಾರ್ಯಾಚರಣೆ ನಿಂತು ಹೋಯಿತು. ತಮ್ಮ ದೊಡ್ಡ ಮೊತ್ತದ ಹೂಡಿಕೆಯನ್ನು ವಂಚಿಸಿರುವುದು ಜನತೆಗೆ ಗೊತ್ತಾಯಿತು ಎಂದು ವಿವರಿಸಿದ್ದಾರೆ. ಈತನ ವಿರುದ್ಧ ಪ್ರಕರಣ ದಾಖಲಿಸುವ ವೇಳೆಗೆ ಆತ ಭಾರತ ತೊರೆದಿದ್ದ. 2022ರ ಆಗಸ್ಟ್ ನಲ್ಲಿ ಈತನ ವಿರುದ್ಧ ವಂಚನೆ ಹಾಗೂ ಐಟಿ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿತ್ತು.