ವಾಟ್ಸ್ ಆ್ಯಪ್ ಇಮೇಜ್ ಡೌನ್ ಲೋಡ್ ಮಾಡಿದ ವ್ಯಕ್ತಿಯ ಮೊಬೈಲ್ ಗೆ ಕನ್ನ; 2 ಲಕ್ಷ ರೂ. ಲಪಟಾಯಿಸಿದ ಹ್ಯಾಕರ್ ಗಳು
ಸಾಂದರ್ಭಿಕ ಚಿತ್ರ | PC : freepik.com
ಹೈದರಾಬಾದ್: ಕೇಂದ್ರ ಸರಕಾರ ಡಿಜಿಟಲ್ ವಂಚನೆಯ ಬಗ್ಗೆ ವ್ಯಾಪಕ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ, ವಾಟ್ಸ್ ಆ್ಯಪ್ ಇಮೇಜ್ ಡೌನ್ ಲೋಡ್ ಮಾಡಿದ ವ್ಯಕ್ತಿಯೊಬ್ಬರ ಮೊಬೈಲ್ ಗೆ ಕನ್ನ ಹಾಕಿರುವ ಹ್ಯಾಕರ್ ಗಳು, 2.01 ಲಕ್ಷ ರೂ. ಲಪಟಾಯಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹ್ಯಾಕರ್ ಗಳು ಈ ಕನ್ನಕ್ಕೆ ಆಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿದ್ದು, ಅದನ್ನು ‘Least Significant Bit (LSB) Steganography’ ಎಂದು ಕರೆಯಲಾಗುತ್ತದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
28 ವರ್ಷದ ಯುವಕರೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಅದಕ್ಕೂ ಕೆಲವೇ ಕ್ಷಣಗಳ ಮುನ್ನ, ಆ ಸಂಖ್ಯೆಯಿಂದ ಅವರಿಗೊಂದು ಚಿತ್ರ ಕೂಡಾ ರವಾನೆಯಾಗಿತ್ತು ಎನ್ನಲಾಗಿದೆ.
ಆ ಚಿತ್ರವು ಹಿರಿಯ ವ್ಯಕ್ತಿಯೊಬ್ಬರದಾಗಿದ್ದು, ಅದರ ಮೇಲೆ “ನಿಮಗೆ ಈ ವ್ಯಕ್ತಿ ಪರಿಚಿತವೆ?’ ಎಂದು ಬರೆಯಲಾಗಿತ್ತು ಎಂದು ಹೇಳಲಾಗಿದೆ.
ಮೊದಮೊದಲು ಜೈನ್ ಎಂಬ ಆ ಯುವಕ ಆ ಅಪರಿಚಿತ ಕರೆಯನ್ನು ನಿರ್ಲಕ್ಷಿಸಿದರೂ, ವಂಚಕರು ಪದೇ ಪದೇ ಕರೆ ಮಾಡಲು ಪ್ರಾರಂಭಿಸಿದ್ದರಿಂದ, ಅವರ ಕರೆಗೆ ಬಲಿ ಬಿದ್ದಿರುವ ಅವರು, ಕೊನೆಗೆ ಆ ಚಿತ್ರವನ್ನು ಡೌನ್ ಲೋಡ್ ಮಾಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 2.01 ಲಕ್ಷ ರೂ. ಕಡಿತಗೊಂಡಿದೆ.
ಈ ಹಣವು ಜೈನ್ ತಮ್ಮ ಖಾತೆ ಹೊಂದಿದ್ದ ಕೆನರಾ ಬ್ಯಾಂಕ್ ನ ಹೈದರಾಬಾದ್ ಶಾಖೆಯ ಎಟಿಎಂನಿಂದ ಕಡಿತಗೊಂಡಿದ್ದು, ಶಾಖೆಯ ಸಿಬ್ಬಂದಿ ಆ ವಹಿವಾಟಿನ ಕುರಿತು ಪರಿಶೀಲಿಸಲು ಪ್ರಯತ್ನಿಸಿದಾಗ, ಜೈನ್ ರ ಧ್ವನಿಯನ್ನು ಅನುಕರಣೆ ಮಾಡಿರುವ ವಂಚಕರು, ಅದರಿಂದ ಪಾರಾಗಿದ್ದಾರೆ.
ಈ ಪ್ರಕರಣದಲ್ಲಿ ವಂಚಕರು ಬಳಸಿರುವ ತಂತ್ರಜ್ಞಾನವನ್ನು ‘Least Significant Bit (LSB) Steganography’ ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು, ಅಷ್ಟೇನು ಮಹತ್ವವಲ್ಲದ ದತ್ತಾಂಶ ಘಟಕಗಳ ತುಣುಕುಗಳನ್ನು ಮಾರ್ಪಡಿಸಿ, ಆಡಿಯೊ ಅಥವಾ ಚಿತ್ರಗಳಂಥ ಮಾಧ್ಯಮಗಳಲ್ಲಿನ ದತ್ತಾಂಶವನ್ನು ಬಚ್ಚಿಡಬಹುದಾಗಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.