ಚೂರಿ ಇರಿತ; ಸೋದರಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಯುವಕ ಬಲಿ
ಪೃಥ್ವಿ (Photo: thenewsminute.com)
ಹೈದರಾಬಾದ್: ನಗರದ ಎಲ್‌ಬಿ ನಗರದಲ್ಲಿಯ ಮನೆಯೊಂದಕ್ಕೆ ನುಗ್ಗಿದ ವ್ಯಕ್ತಿಯು ಚೂರಿಯಿಂದ ಹಲ್ಲೆ ನಡೆಸಿದ ಪರಿಣಾಮ ಯುವಕನೋರ್ವ ಮೃತಪಟ್ಟಿದ್ದು, ಆತನ ಸೋದರಿ ಗಾಯಗೊಂಡಿದ್ದಾಳೆ.
ರವಿವಾರ ಈ ಘಟನೆ ನಡೆದಿದ್ದು, ಹೋಮಿಯೊಪತಿ ವೈದ್ಯೆಯಾಗಿರುವ ಸೋದರಿ ಸಾಂಘ್ವಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಬಿ.ಟೆಕ್ ಪದವೀಧರ ಪೃಥ್ವಿ ದುಷ್ಕರ್ಮಿಯ ಚೂರಿ ಇರಿತಕ್ಕೆ ಬಲಿಯಾಗಿದ್ದಾನೆ.
ಚೂರಿ ಇರಿತದಿಂದ ಗಾಯಗೊಂಡಿದ್ದ ಪೃಥ್ವಿ ಮತ್ತು ಸಾಂಘ್ವಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೃಥ್ವಿ ಕೊನೆಯುಸಿರೆಳೆದಿದ್ದಾನೆ.
ಆರೋಪಿ ರಾಮನಾಥಪುರ ನಿವಾಸಿ ಶಿವಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳು ಸೂಚಿಸಿರುವಂತೆ ಶಿವಕುಮಾರ ಸಾಂಘ್ವಿಯನ್ನು ಹಿಂಬಾಲಿಸುತ್ತಿದ್ದು, ತನ್ನನ್ನು ಮದುವೆಯಾಗುವಂತೆ ಆಕೆಗೆ ದುಂಬಾಲು ಬಿದ್ದಿದ್ದ. ದಾಳಿಗೆ ಕಾರಣವನ್ನು ತಾವಿನ್ನೂ ಕಂಡುಕೊಳ್ಳಬೇಕಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಪೃಥ್ವಿ ಮತ್ತು ಸಾಂಘ್ವಿ ನೆರೆಯ ರಂಗಾರೆಡ್ಡಿ ಜಿಲ್ಲೆಯ ನಿವಾಸಿಗಳಾಗಿದ್ದು, ಎಲ್.ಬಿ.ನಗರದ ಆರ್‌ಟಿಸಿ ಕಾಲನಿಯಲ್ಲಿ ವಾಸವಿದ್ದರು.