'ದೃಶ್ಯಂ' ಸಿನಿಮಾದಿಂದ ಪ್ರೇರಣೆ: ವಿಮೆ ಹಣಕ್ಕಾಗಿ ತನ್ನ ಅತ್ತೆಯನ್ನೇ ಕೊಂದ ಅಳಿಯ!
ಸಾಂದರ್ಭಿಕ ಚಿತ್ರ
ಹೈದರಾಬಾದ್: ಮಲಯಾಳಂ ಚಿತ್ರ ‘ದೃಶ್ಯಂ’ ತನ್ನ ವಿಶಿಷ್ಟ ಕತೆ, ಚಿತ್ರಕತೆ, ನಿರೂಪಣೆಯಿಂದಾಗಿ ಬಾಕ್ಸಾಫೀಸ್ ಸೂರೆಗೊಂಡು, ಭಾರತದ ಹಲವು ಭಾಷೆಗಳಿಗೆ ರೀಮೇಕ್ ಕೂಡಾ ಆಗಿತ್ತು. ಈ ಚಿತ್ರದ ಕತೆಯ ಎಳೆಯು ಈಗಲೂ ಸಾಮಾಜಿಕ ವಲಯದಲ್ಲಿ ತರಂಗಗಳನ್ನು ಎಬ್ಬಿಸುತ್ತಲೇ ಇದ್ದು, ಈ ಚಿತ್ರದಿಂದ ಪ್ರೇರಣೆಗೊಂಡ ಹಲವರು ಹತ್ಯೆ ಕೃತ್ಯ ನಡೆಸಿದ್ದ ಘಟನೆಗಳು ವರದಿಯಾಗಿದ್ದವು. ಈ ಸಾಲಿಗೆ ಮತ್ತೊಂದು ಸೇರ್ಪಡೆ ತೆಲಂಗಾಣದ ಸಿದ್ದಿಪೇಟೆಯ ವ್ಯಕ್ತಿಯೊಬ್ಬ ವಿಮಾ ಹಣವನ್ನು ಪಡೆಯಲು ‘ದೃಶ್ಯಂ’ ಚಿತ್ರದ ಮಾದರಿಯಲ್ಲಿ ತನ್ನ ಅತ್ತೆಯನ್ನೇ ಹತ್ಯೆಗೈದಿರುವ ಘಟನೆ.
ಈ ಘಟನೆ ಪೆದ್ದಮಾಸಂಪಲ್ಲಿಯಿಂದ ಬೆಳಕಿಗೆ ಬಂದಿದ್ದು, ಇಡೀ ಗ್ರಾಮಸ್ಥರನ್ನು ಸ್ತಬ್ಧಗೊಳಿಸಿದೆ. ಆರೋಪಿ ವೆಂಕಟೇಶ್ ಎಂಬ ವ್ಯಕ್ತಿಯು ತನ್ನ ಅತ್ತೆ ರಾಮವ್ವ ಹೆಸರಿನಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಎಸ್ಬಿಐ ಹಾಗೂ ಅಂಚೆ ಕಚೇರಿಯಲ್ಲಿ ವಿವಿಧ ಜೀವ ವಿಮೆಯನ್ನು ಮಾಡಿಸಿದ್ದ ಎಂದು ವರದಿಯಾಗಿದೆ.
ಸಿದ್ದಿಪೇಟೆ ಪೊಲೀಸರ ಪ್ರಕಾರ, ತನ್ನ ಅತ್ತೆ ಹೆಸರಿನಲ್ಲಿ ಸುಮಾರು 60 ಲಕ್ಷ ರೂ. ಜೀವ ವಿಮೆ ಮಾಡಿಸಿದ್ದ ಆರೋಪಿ ವೆಂಕಟೇಶ್, ಆ ಜೀವ ವಿಮೆ ಮೊತ್ತವನ್ನು ಪಡೆಯಲು ಅತ್ಯಂತ ನಾಜೂಕಾಗಿ ತನ್ನ ಅತ್ತೆಯದ್ದು ರಸ್ತೆ ಅಪಘಾತವೆಂದು ನಂಬಿಸುವಂಥ ತಂತ್ರವನ್ನು ಹೆಣೆದಿದ್ದ ಎನ್ನಲಾಗಿದೆ. ಈ ತಂತ್ರದ ಭಾಗವಾಗಿ ಆರೋಪಿ ವೆಂಕಟೇಶ್ ತನ್ನ ಅತ್ತೆಯನ್ನು ಕೆಲಸದ ನೆಪದಲ್ಲಿ ಹೊಲಕ್ಕೆ ಕರೆದೊಯ್ದಿದ್ದನು ಎಂದು ಹೇಳಲಾಗಿದೆ.
ಬಳಿಕ, ಕತ್ತಲು ಆವರಿಸಿದ ನಂತರ, ಸುಮಾರು ಮಧ್ಯರಾತ್ರಿಯ ವೇಳೆ ಆಕೆಯನ್ನು ಆತ ಮನೆಗೆ ವಾಪಸು ಕಳಿಸಿದ್ದಾನೆ. ಆ ಮೂಲಕ, ತನ್ನ ‘ಅಪಘಾತ’ ಯೋಜನೆಯನ್ನು ಕಾರ್ಯಗತಗೊಳಿಸಲು ವೇದಿಕೆ ಸಿದ್ಧಗೊಳಿಸಿದ್ದಾನೆ.
ಈ ಯೋಜನೆಯ ಕುರಿತು ತನ್ನ ಸಹೋದರನೊಂದಿಗೆ ಹಂಚಿಕೊಂಡಿದ್ದ ಆರೋಪಿ ವೆಂಕಟೇಶ್, ನೀನೇನಾದರೂ ಈ ಯೋಜನೆಗೆ ನೆರವು ನೀಡಿದರೆ ವಿಮಾ ಮೊತ್ತದ ಅರ್ಧ ಭಾಗವನ್ನು ನಿನಗೆ ನೀಡುವುದಾಗಿ ಆತನಿಗೆ ಭರವಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮವ್ವ ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಆರೋಪಿ ವೆಂಕಟೇಶ್ ನ ಸಹಚರನೊಬ್ಬ ಆಕೆಗೆ ಕಾರಿನಿಂದ ಢಿಕ್ಕಿ ಹೊಡೆದಿದ್ದಾನೆ. ಆ ಢಿಕ್ಕಿಯ ತೀವ್ರತೆಗೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಮವ್ವರ ಹತ್ಯೆಗೂ ‘ದೃಶ್ಯಂನ'’ ಚಿತ್ರಕ್ಕೂ ಸಾಕಷ್ಟು ಹೋಲಿಕೆಯಿದೆ ಎಂದು ತಿಳಿಸಿರುವ ಪೊಲೀಸರು, ಆರೋಪಿಗಳು ಪೊಲೀಸರ ದಾರಿ ತಪ್ಪಿಸಲು ತುಂಬಾ ನಾಜೂಕಾಗಿ ತಮ್ಮ ಯೋಜನೆಯನ್ನು ಹೆಣೆದಿದ್ದರು ಎಂದೂ ಹೇಳಿದ್ದಾರೆ.