×
Ad

ಉತ್ತರ ಪ್ರದೇಶ | ‘ಡ್ರೋನ್ ಕಳ್ಳ’ನೆಂಬ ಶಂಕೆಯಿಂದ ವ್ಯಕ್ತಿಯನ್ನು ಥಳಿಸಿ ಗುಂಪು ಹತ್ಯೆ

ಕಳ್ಳತನಕ್ಕೆ ಮುಂಚೆ ಮನೆ ಗುರುತಿಸಲು ಡ್ರೋನ್ ಹಾರಾಟ ವದಂತಿ!

Update: 2025-10-05 22:05 IST

Photo Credit : newindianexpress.com

ಲಕ್ನೋ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ “ಡ್ರೋನ್ ಕಳ್ಳ” ಎಂಬ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರ ಗುಂಪೊಂದು ಥಳಿಸಿ ಕೊಂದ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಫತೇಪುರ್ ಕೊಟ್ವಾಲಿ ಪ್ರದೇಶದ ನಿವಾಸಿ ಹರಿಯೋಮ್ (38) ಎಂದು ಪೊಲೀಸರು ಗುರುತಿಸಿದ್ದಾರೆ.

ಘಟನೆ ಉಂಚಹಾರ್ ಕೊತ್ವಾಲಿ ವ್ಯಾಪ್ತಿಯ ಈಶ್ವರ್‌ದಾಸ್‌ಪುರ ರೈಲು ನಿಲ್ದಾಣದ ಹತ್ತಿರ ನಡೆದಿದ್ದು, ಗುರುವಾರ ಬೆಳಿಗ್ಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಗಾಯಗಳಿಂದ ಕೂಡಿದ ಮೃತದೇಹ ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

“ಮೃತನ ಪತ್ನಿಯ ದೂರಿನ ಆಧಾರದ ಮೇಲೆ 12 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಆರು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ,” ಎಂದು ಉಂಚಹಾರ್ ಉಪವಿಭಾಗಾಧಿಕಾರಿ (ಸಿಒ) ಗಿರಿಜಾ ಶಂಕರ್ ತ್ರಿಪಾಠಿ ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಹರಿಯೋಮ್ ಉಂಚಹಾರ್–ದಲ್ಮೌನ್ ರಸ್ತೆಯ ದದೇದ್‌ಪುರ್ ಮಜ್ರೆ ಈಶ್ವರ್‌ದಾಸ್‌ಪುರ ಕಡೆಗೆ ಹೋಗುತ್ತಿದ್ದಾಗ ಸುಮಾರು 25 ಗ್ರಾಮಸ್ಥರು, ತಡೆದು ವಿಚಾರಣೆ ನಡೆಸಿದರು. ಹತ್ತಿರದ ಹಳ್ಳಿಯವ ಎಂದು ಹರಿಯೋಮ್ ವಿವರಿಸಿದರೂ, ಗ್ರಾಮಸ್ಥರು ನಂಬದೆ “ಡ್ರೋನ್ ಕಳ್ಳ” ಎಂದು ಶಂಕಿಸಿ ಹಲ್ಲೆ ನಡೆಸಿದರು ಎಂದು ತಿಳಿದು ಬಂದಿದೆ.

ಗ್ರಾಮಸ್ಥರು ಕೋಲುಗಳು ಮತ್ತು ಬೆಲ್ಟ್‌ಗಳಿಂದ ಹಲ್ಲೆ ನಡೆಸಿ, ನಂತರ ಸಂತ್ರಸ್ತನನ್ನು ಕಾಲುವೆ ದಂಡೆಗೆ ಕರೆದೊಯ್ದು ಕಂಬಕ್ಕೆ ಕಟ್ಟಿ ಥಳಿಸಿದರು. ಆತ ನಿರಪರಾಧಿ ಎಂದು ವಿನಂತಿಸಿದರೂ ಯಾರೂ ಕೇಳಲಿಲ್ಲ. ಬಳಿಕ ಹಹರಿಯೋಮ್ ರನ್ನು ರೈಲ್ವೆ ಹಳಿಯ ಬಳಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿಟ್ಟುಹೋದರು ಎಂದು ತಿಳಿದು ಬಂದಿದೆ.

ಮರುದಿನ ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಹರಿಯೋಮ್‌ ರನ್ನು ಉಂಚಹಾರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತರೆಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಲವಾದ ಹೊಡೆತಗಳು, ಎದೆಯ ಮೇಲೆ ಬೆಲ್ಟ್ ಗುರುತುಗಳು ಮತ್ತು ದೇಹದಾದ್ಯಂತ ಹಲ್ಲೆಯ ಗುರುತುಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಅಮ್ರೋಹಾ ನಗರದಲ್ಲಿ ಅಚಾನಕ್ಕಾಗಿ ಡ್ರೋನ್ ಕಾಣಿಸಿಕೊಂಡ ಘಟನೆಯ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ “ಡ್ರೋನ್ ಕಳ್ಳರು” ಎಂಬ ವದಂತಿ ವ್ಯಾಪಕವಾಗಿ ಹರಡಿದೆ. ಕನಿಷ್ಠ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಿವಾಸಿಗಳು ಕಳ್ಳರು ಮನೆಗಳನ್ನು ಗುರುತಿಸಲು ಅಥವಾ ಕಳವುಗೈಯುವ ಮೊದಲು ಡ್ರೋನ್ ಬಳಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ವದಂತಿಗೆ ಜನರು ಭಯಭೀತರಾಗಿದ್ದಾರೆ. ಕೆಲ ಗ್ರಾಮಗಳಲ್ಲಿ ನಾಗರಿಕರು ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದು, ಅಪರಿಚಿತರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಅಪರಾಧಿಗಳು ಡ್ರೋನ್‌ಗಳನ್ನು ಬಳಸಿದ್ದಾರೆ ಎಂಬುದಕ್ಕೆ ಯಾವುದೇ ದೃಢ ಪುರಾವೆ ದೊರೆತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಯಾಗ್‌ರಾಜ್, ಪ್ರತಾಪ್‌ಗಢ, ಜೌನ್‌ಪುರ ಮತ್ತು ಅಜಮ್‌ಗಢ ಸೇರಿದಂತೆ ಪೂರ್ವ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿಯೂ ಈ ರೀತಿಯ ವದಂತಿಗಳು ವೇಗವಾಗಿ ಹರಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News