ಉತ್ತರ ಪ್ರದೇಶ | ಅಣ್ಣನ ಕೊಲೆ ಆರೋಪದಲ್ಲಿ ಜಾಮೀನು ಪಡೆದಿದ್ದ ವ್ಯಕ್ತಿಯಿಂದ ಅತ್ತಿಗೆ, ಮೂವರು ಪುತ್ರಿಯರ ಹತ್ಯೆ
ಸಾಂದರ್ಭಿಕ ಚಿತ್ರ
ಬಹ್ರೈಚ್,ಆ.21: ಅಣ್ಣನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ವ್ಯಕ್ತಿಯು ತನ್ನ ಸಹಚರನ ನೆರವಿನೊಂದಿಗೆ ವಿಧವೆ ಅತ್ತಿಗೆ ಹಾಗೂ ಆಕೆಯ ಮೂವರು ಪುತ್ರಿಯರನ್ನು ನದಿಗೆ ತಳ್ಳಿ ಹತ್ಯೆಗೈದಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೋಲಿಸರು ಗುರುವಾರ ತಿಳಿಸಿದ್ದಾರೆ.
2018ರಲ್ಲಿ ಆಸ್ತಿ ವಿವಾದದಲ್ಲಿ ತನ್ನ ಅಣ್ಣ ಸಂತೋಷ್ ಕುಮಾರ್ ನನ್ನು ಕೊಂದಿದ್ದ ಆರೋಪದಲ್ಲಿ ಬಹ್ರೈಚ್ ನ ರಮಾಯಿಪುರ ಗ್ರಾಮದ ನಿವಾಸಿ ಅನಿರುದ್ಧ ಕುಮಾರ್ ನನ್ನು ಬಂಧಿಸಲಾಗಿತ್ತು. ಕೆಲವು ತಿಂಗಳುಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆತ ತನ್ನ ಅಣ್ಣನ ಪತ್ನಿ ಸುಮನ್(36) ಜೊತೆ ಬಲವಂತದಿಂದ ಸಂಬಂಧವನ್ನು ಹೊಂದಿದ್ದ ಮತ್ತು ಆಕೆಯೊಂದಿಗೆ ವಾಸವಿದ್ದ. ಅವರಿಗೆ ಅಂಶಿಕಾ(6) ಮತ್ತು ಲಾಡೋ(3) ಎಂಬ ಇಬ್ಬರು ಪುತ್ರಿಯರಿದ್ದರು. ಸುಮನ್ ಗೆ ತನ್ನ ಪತಿ ಸಂತೋಷನಿಂದ ಪಡೆದಿದ್ದ ಮಗಳು ನಂದಿನಿ(12)ಯೂ ಇದ್ದಳು.
ಪತಿಯ ಕೊಲೆ ಪ್ರಕರಣದಲ್ಲಿ ಸುಮನ್ ಮುಖ್ಯ ಸಾಕ್ಷಿಯಾಗಿದ್ದರಿಂದ ತನ್ನ ಹೇಳಿಕೆಯನ್ನು ಬದಲಿಸುವಂತೆ ಅನಿರುದ್ಧ ಆಕೆಯನ್ನು ಒತ್ತಾಯಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಸುಮನ್ ಇತ್ತೀಚಿಗೆ ತನ್ನ ಮೂವರು ಪುತ್ರಿಯರೊಂದಿಗೆ ತವರಿಗೆ ಸ್ಥಳಾಂತರಗೊಂಡಿದ್ದಳು ಎಂದು ಎಎಸ್‌ಪಿ(ಗ್ರಾಮೀಣ) ದುರ್ಗಾಪ್ರಸಾದ್ ತಿವಾರಿ ತಿಳಿಸಿದರು.
ಆ.14ರಿಂದ ತನ್ನ ಪುತ್ರಿ ಮತ್ತು ಮೂವರು ಮೊಮ್ಮಕ್ಕಳು ನಾಪತ್ತೆಯಾಗಿದ್ದಾರೆಂದು ಸುಮನ್ ಳ ತಾಯಿ ರಾಮಪತಾ ಪೋಲಿಸ್ ದೂರು ದಾಖಲಿಸಿದ್ದರು. ಕೊಲ್ಲುವ ಉದ್ದೇಶದಿಂದ ಅನಿರುದ್ಧ್ ಮತ್ತು ಆತನ ಸಹಚರ ಅವರನ್ನು ಅಪಹರಿಸಿದ್ದಾರೆ ಎಂದು ಆಕೆ ಶಂಕೆ ವ್ಯಕ್ತಪಡಿಸಿದ್ದರು.
ಸುಳಿವಿನ ಮೇರೆಗೆ ಅನಿರುದ್ಧ್ ನನ್ನು ಬಂಧಿಸಿದ ಪೋಲಿಸರು ವಿಚಾರಣೆ ನಡೆಸಿದಾಗ ಸಹಚರನ ನೆರವಿನೊಂದಿಗೆ ಆ.14ರಂದು ಮಹಿಪುರ್ವಾ ಪಟ್ಟಣಕ್ಕೆ ಸುಮನ್ ಮತ್ತು ಮೂವರು ಮಕ್ಕಳನ್ನು ಕರೆಸಿಕೊಂಡಿದ್ದು ಬಳಿಕ ಲಖಿಂಪುರ ಖೇರಿ ಜಿಲ್ಲೆಯ ಖಮ್ ಹರಿಯಾ ಪ್ರದೇಶದ ಸೇತುವೆ ಬಳಿ ಕರೆದೊಯ್ದು ಶಾರದಾ ನದಿಯಲ್ಲಿ ತಳ್ಳಿದ್ದನ್ನು ಒಪ್ಪಿಕೊಂಡಿದ್ದಾನೆ.
ಪೋಲಿಸರು ಸೇತುವೆ ಸಮೀಪದ ಪೊದೆಗಳಿಂದ ಸುಮನ್ ಮತ್ತು ಮಕ್ಕಳ ಬಟ್ಟೆಗಳು, ಬಾಲಕಿಯೋರ್ವಳ ಚಪ್ಪಲಿಗಳು ಮತ್ತು ಅಪರಾಧಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.
ಸುಮನ್ ಮತ್ತು ಆಕೆಯ ಪುತ್ರಿಯರ ಶವಗಳು ಇನ್ನೂ ಪತ್ತೆಯಾಗಿಲ್ಲ. ಅನಿರುದ್ಧ್ ನ ಸಹಚರ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿವಾರಿ ತಿಳಿಸಿದರು.