ಜಾರ್ಖಂಡ್ | ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರಕ್ಕೆ ತಳ್ಳಿದ ಪತಿ
Update: 2025-07-04 21:44 IST
ರಾಮಗಢ : ಜಾರ್ಖಂಡ್‌ನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ್ದಾನೆ. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಾರಣಾಸಿ ಎಕ್ಸ್‌ಪ್ರೆಸ್ ರೈಲಿನಿಂದ ತಳ್ಳಿ ಉತ್ತರ ಪ್ರದೇಶ ಮೂಲದ ಖುಷ್ಬೂ ಕುಮಾರಿ(25)ಯನ್ನು ಆಕೆಯ ಪತಿ ಕೊಲೆಗೆ ಯತ್ನಿಸಿದ್ದಾನೆ. ರೈಲು ಭುರ್ಕುಂಡ ಮತ್ತು ಪತ್ರಾತು ನಿಲ್ದಾಣಗಳ ನಡುವೆ ಸಂಚರಿಸುವಾಗ ಘಟನೆ ನಡೆದಿದೆ.
ʼಚಲಿಸುತ್ತಿದ್ದ ರೈಲಿನಿಂದ ನೀರು ತುಂಬಿದ ಕಂದಕಕ್ಕೆ ಬಿದ್ದ ಯುವತಿಯನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಇದೀಗ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ʼನನ್ನ ಪತಿ ನನ್ನನ್ನು ಕೊಲೆ ಮಾಡಿ ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆʼ ಎಂದು ಖುಷ್ಬೂ ಕುಮಾರಿ ಆರೋಪಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.