ತ್ರಿಪುರಾ | ತ್ರಿಕೋನ ಪ್ರೇಮ : ಯುವಕನನ್ನು ಕೊಲೆ ಮಾಡಿ ಫ್ರೀಝರ್‌ನಲ್ಲಿಟ್ಟ ವೈದ್ಯ!
Photo credit: indiatoday.in
ಅಗರ್ತಲಾ: ಮೇಘಾಲಯದಲ್ಲಿ ನಡೆದ 'ಹನಿಮೂನ್ ಹತ್ಯೆ' ಪ್ರಕರಣ ದೇಶದಲ್ಲಿ ಭಾರೀ ಸುದ್ದಿಯಾಗಿರುವ ಮಧ್ಯೆ ತ್ರಿಪುರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 26ರ ಹರೆಯದ ಯುವಕನನ್ನು ಕೊಲೆ ಮಾಡಿ ಮೃತದೇಹವನ್ನು ಐಸ್ ಕ್ರೀಮ್ ಫ್ರೀಝರ್‌ನಲ್ಲಿಡಲಾಗಿದೆ. ಕೊಲೆಗೆ ತ್ರಿಕೋನ ಪ್ರೇಮವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಅಗರ್ತಲಾದ ಇಂದ್ರನಗರ ಪ್ರದೇಶದ ನಿವಾಸಿ ಶರಿಫುಲ್ ಇಸ್ಲಾಂ ಕೊಲೆಯಾದ ಯುವಕ. ಈತ ಅಗರ್ತಲಾ ಸ್ಮಾರ್ಟ್ ಸಿಟಿ ಮಿಷನ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಅವರು ಅಗರ್ತಲಾದ ಇಂದ್ರನಗರ ಪ್ರದೇಶದಿಂದ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ.
ಈ ಕೊಲೆಗೆ ಡಾ.ದಿವಾಕರ್ ಸಾಹಾ(28) ಸಂಚು ರೂಪಿಸಿದ್ದಾನೆ. ತನ್ನ ಸೋದರ ಸಂಬಂಧಿ ಆಗಿರುವ ನಬನಿತಾ ದಾಸ್ (25) ಜೊತೆ ಶರಿಫುಲ್ ಸಂಬಂಧ ಹೊಂದಿರುವುದರಿಂದ ಅಸೂಯೆ ಪಟ್ಟು ಆ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಎಂಬಿಬಿಎಸ್ ಪದವೀಧರನಾಗಿರುವ ದಿವಾಕರ್ ಸಾಹಾ, ಜೂನ್ 8ರಂದು ದಕ್ಷಿಣ ಇಂದಿರಾನಗರದಲ್ಲಿರುವ ಸಂಬಂಧಿಕರ ಮನೆಗೆ ಶರಿಫುಲ್‌ನನ್ನು ಆಹ್ವಾನಿಸಿದ್ದ. ಅಲ್ಲಿ ಇತರ ಮೂವರ ಸಹಾಯದಿಂದ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆತನ ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ್ದಾನೆ. ಮರುದಿನ ಗಂದಚೆರಾದಲ್ಲಿ ವಾಸವಿದ್ದ ತನ್ನ ಪೋಷಕರಿಗೆ ಕರೆ ಮಾಡಿ ಬರುವಂತೆ ಹೇಳಿದ್ದ. ಅಗರ್ತಲಾಕ್ಕೆ ಬಂದ ಪೋಷಕರ ಜೊತೆ ದಿವಾಕರ್ ಟ್ರಾಲಿ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಮೃತದೇಹವನ್ನು ತಮ್ಮ ಅಂಗಡಿಯಲ್ಲಿನ ಐಸ್ ಕ್ರೀಮ್ ಫ್ರೀಝರ್‌ನಲ್ಲಿ ಬಚ್ಚಿಟ್ಟಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಶರಿಫುಲ್ ನಾಪತ್ತೆ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು. ಪ್ರಕರಣದ ತನಿಖೆ ವೇಳೆ ಪೊಲೀಸರು ಮೊದಲು ಯುವತಿಯ ಸೋದರ ಸಂಬಂಧಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಮೃತದೇಹವನ್ನು ಫ್ರೀಝರ್‌ನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಮತ್ತು ಆತನ ಪೋಷಕರು ಸೇರಿದಂತೆ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕಿರಣ್ ಕುಮಾರ್ ಹೇಳಿದ್ದಾರೆ.