ಸೆ. 13ರಂದು ಮಣಿಪುರಕ್ಕೆ ಪ್ರಧಾನಿ ಭೇಟಿ ಸಾಧ್ಯತೆ; ಬಿಗಿ ಭದ್ರತೆ
ನರೇಂದ್ರ ಮೋದಿ | PC : PTI
ಇಂಫಾಲ, ಸೆ. 11: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಸೆ.13) ಮಣಿಪುರಕ್ಕೆ ಬೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂಫಾಲ ಹಾಗೂ ಚುರಾಚಾಂದ್‌ಪುರ ಜಿಲ್ಲಾ ಕೇಂದ್ರಗಳ ಪಟ್ಟಣಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ನಿರ್ಮಾಣ ಮಾಡಲಾದ ಇಂಫಾಲದ ಕಂಗಲಾ ಫೋರ್ಟ್ ಹಾಗೂ ಚುರಾಚಾಂದಪುರದ ಪೀಸ್ ಮೈದಾನದ ಸುತ್ತಮುತ್ತ ಕೇಂದ್ರ ಹಾಗೂ ರಾಜ್ಯದ ಪಡೆಗಳ ಸಿಬ್ಬಂದಿಯನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೋದಿ ಅವರು ಮಿಜೋರಾಂನಿಂದ ಮಣಿಪುರಕ್ಕೆ ಆಗಮಿಸುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಸಂಬಂಧಿಸಿ ಹೊಸದಿಲ್ಲಿ ಅಥವಾ ಇಂಫಾಲದಿಂದ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ. ಪ್ರಧಾನಿ ಅವರ ಭೇಟಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ಬಾರಿ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2023 ಮೇಯಲ್ಲಿ ಕುಕಿಗಳು ಹಾಗೂ ಮೈತೈಗಳ ನಡುವೆ ಜನಾಂಗೀಯ ಹಿಂಸಾಚಾರ ಆರಂಭವಾದ ಬಳಿಕ ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಜನಾಂಗೀಯ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಹಾಗೂ ಸಾವಿರಾರು ಮಂದಿ ನಿರ್ವಸಿತರಾಗಿದ್ದರು.
ಕಂಗಲಾ ಫೋರ್ಟ್‌ಗೆ ಹೋಗುವ ಸಂಜೆಂತೋಂಗ್, ಮಿನುತೋಂಗ್ ಹಾಗೂ ಮೊಯಿರಂಗ್‌ಖೋಮ್ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ರಾಜ್ಯದ ಭದ್ರತಾ ಸಿಬ್ಬಂದಿಯೊಂದಿಗೆ ಕೇಂದ್ರದ ಭದ್ರತಾ ತಂಡಗಳು ಕಾಂಗ್ಲಾ ಪೋರ್ಟ್ ಅನ್ನು 24 ಗಂಟೆಗಳ ಕಾಲವೂ ಪರಿಶೀಲಿಸುತ್ತಿದೆ. ರಾಜ್ಯ ವಿಪತ್ತು ನಿರ್ವವಣಾ ಪಡೆ ಪೋರ್ಟ್ ಅನ್ನು ಸುತ್ತುವರಿದಿರುವ ಕಂದಕದಲ್ಲಿ ಗಸ್ತು ನಡೆಸಲು ದೋಣಿಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.