ಮಣಿಪುರ: ಉದ್ರಿಕ್ತ ಗುಂಪಿನ ದಾಳಿಯಲ್ಲಿ ಎಸ್‌ಪಿಗೆ ಗಾಯ
ಮನೋಜ್ ಪ್ರಭಾಕರ್ | Source: X/@SureshKrManipur
ಇಂಫಾಲ: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಕಚೇರಿಯ ಮೇಲೆ ಉದ್ರಿಕ್ತ ಗುಂಪೊಂದು ಶುಕ್ರವಾರ ನಡೆಸಿದ ದಾಳಿಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಮನೋಜ್ ಪ್ರಭಾಕರ್ ಗಾಯಗೊಂಡಿದ್ದಾರೆ.
ದುಷ್ಕರ್ಮಿಗಳು ಪೊಲೀಸ್ ಸೂಪರಿಂಟೆಂಡೆಂಟ್ ಕಚೇರಿಯ ಮೇಲೆ ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆದರು ಎಂದು ಮಣಿಪುರ ಪೊಲೀಸರು ಹೇಳಿದರು. ದಾಳಿಯಲ್ಲಿ ಕೆಲವು ವಾಹನಗಳಿಗೂ ಹಾನಿಯಾಗಿದೆ.
ಪೊಲೀಸ್ ಸೂಪರಿಂಟೆಂಡೆಂಟ್ ಮನೋಜ್ ಪ್ರಭಾಕರ್ ಗಾಯಗಳಿಗೆ ಚಿಕಿತ್ಸೆ ಪಡೆದ ಬಳಿಕ, ಹೊಸ ಉದ್ವಿಗ್ನತೆಯನ್ನು ಶಮನ ಮಾಡುವ ಕಾರ್ಯಾಚರಣೆಯ ನೇತೃತ್ವವನ್ನು ಮುಂದುವರಿಸಿದರು. ಪರಿಸ್ಥಿತಿಯನ್ನು ನಿಭಾಯಿಸಲು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದರು.
ಹಿಂಸಾಚಾರದಲ್ಲಿ ಉದ್ರಿಕ್ತ ಗುಂಪಿನ 15 ಸದಸ್ಯರೂ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದರು. ಸೇನಾ ಸಮವಸ್ತ್ರದಂತೆ ಕಾಣುವ ಬಟ್ಟೆಗಳನ್ನು ಧರಿಸಿದ ವ್ಯಕ್ತಿಗಳು ಆಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವುದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗಾಯಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಹಾನಿಗಿಡಾಗಿರುವ ವಾಹನಗಳ ಚಿತ್ರಗಳೂ ಹರಿದಾಡುತ್ತಿವೆ.
ಮಣಿಪುರದಲ್ಲಿ ಮೆತೈ ಮತ್ತು ಕುಕಿ-ರೊ-ಹಮರ್ಸ್ ಸಮುದಾಯಗಳ ನಡುವೆ 2023 ಮೇ ತಿಂಗಳಲ್ಲಿ ಸ್ಫೋಟಗೊಂಡ ಜನಾಂಗೀಯ ಸಮರವು ಈವರೆಗೆ ಕನಿಷ್ಠ 258 ಜನರನ್ನು ಬಲಿಪಡೆದುಕೊಂಡಿದೆ. 59,000ಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದಾರೆ.