ಕ್ರಿಮಿನಲ್ ಚಟುವಟಿಕೆ | ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆಯ ಭಾಮೈದುನ ಹಾಗೂ ಇನ್ನಿತರ 8 ಮಂದಿಯ ಗಡೀಪಾರು: ಪೊಲೀಸರು
ಮನೋಜ್ ಜಾರಂಗೆ | PTI
ಮುಂಬೈ: ಮರಳು ಮಾಫಿಯಾ ಹಾಗೂ ಕ್ರಿಮಿನಲ್ ಚಟುವಟಿಕೆಗಳ ವಿರುದ್ಧದ ಕ್ರಮದ ಭಾಗವಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆಯ ಭಾಮೈದುನ ಹಾಗೂ ಇನ್ನಿತರ ಎಂಟು ಮಂದಿಯನ್ನು ಜಲ್ನಾ, ಬೀಡ್, ಪರ್ಭಾನಿ ಹಾಗೂ ಛತ್ರಪತಿ ಸಂಭಾಜಿನಗರ ಜಿಲ್ಲೆಗಳಿಂದ ಹೊರಹಾಕಲಾಗಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೋಜ್ ಜಾರಂಗೆಯ ಭಾಮೈದುನ ವಿಕಾಸ್ ಖೇಡ್ಕರ್ ಹಾಗೂ ಇನ್ನಿತರ ಎಂಟು ಮಂದಿಯನ್ನು ಹೊರ ಹಾಕುವ ನಿರ್ಧಾರವನ್ನು ಜಲ್ನಾ ಜಿಲ್ಲೆಯ ಅಂಬಾಡ್ ನ ಉಪ ವಿಭಾಗಾಧಿಕಾರಿ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ನಾಲ್ಕು ಜಿಲ್ಲೆಗಳಿಂದ ಹೊರ ಹಾಕಲಾಗಿರುವ ಇನ್ನಿತರ ಎಂಟು ಮಂದಿಯ ಪೈಕಿ ಕೇಶವ್ ಮಾಧವ್ ವೈಭಟ್, ಸಂಯೋಗ್ ಮಧುಕರ್ ಸೋಲುಂಕೆ, ಗಜಾನನ್ ಗಣಪತ್ ಸೋಲುಂಕೆ, ಅಮೋಲ್ ಕೇಶವ್ ಪಂಡಿತ್, ಗೋರಖ್ ಬಾಬನ್ ರಾವ್ ಕುರಾಂಕರ್, ಸಂದೀಪ್ ಸುಖದೇವ್ ಲೋಖರೆ, ರಾಮದಾಸ್ ಮಾಸುರಾವ್ ತೌರ್ ಹಾಗೂ ಮಾಸುರಾವ್ ತೌರ್ ಸೇರಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.
2019ರಿಂದ ಈ ವ್ಯಕ್ತಿಗಳ ವಿರುದ್ಧ ಮರಳು ಕಳ್ಳತನ, ಅಂತರ್ವಾಲಿ ಸಾರಥಿ ಹೋರಾಟದ ವೇಳೆ ಆಸ್ತಿಗಳಿಗೆ ಅಗ್ನಿಸ್ಪರ್ಶ ಹಾಗೂ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಸೇರಿದಂತೆ ಇನ್ನಿತರ ಆರೋಪಗಳಡಿ ಜಲ್ನಾದ ಅಂಬಾಡ್, ಘನಸಾವಂಗಿ ಹಾಗೂ ಗೊಂಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.
ಈ ಆರೋಪಿಗಳ ಪೈಕಿ ಆರು ಮಂದಿ ಜಾರಂಗೆಯ ಮರಾಠ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದ್ದಾರೆ.