ಉತ್ತರ ಪ್ರದೇಶ | ವ್ಯಕ್ತಿಯೋರ್ವ ಮೃತಪಟ್ಟು ಒಂದು ವಾರ ಕಳೆದರೂ ಗಮನಿಸದ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಸಹೋದರ!
ಸಾಂದರ್ಭಿಕ ಚಿತ್ರ (credit: Grok)
ಕಾನ್ಪುರ: ವ್ಯಕ್ತಿಯೊಬ್ಬ ಮೃತಪಟ್ಟ ಐದು ಅಥವಾ ಆರು ದಿನದ ನಂತರ ತನ್ನ ಮನೆಯ ಕೋಣೆಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ದೇವನಗರ್ ಪ್ರದೇಶದಿಂದ ವರದಿಯಾಗಿದೆ. ಆದರೆ, ಅದೇ ಮನೆಯ ಮೇಲಂತಸ್ತಿನಲ್ಲಿ ವಾಸಿಸುತ್ತಿದ್ದ ಮೃತ ವ್ಯಕ್ತಿಯ ಹಿರಿಯ ಸಹೋದರ ಹಾಗೂ ಸೋದರಳಿಯನಿಗೆ ಇದರ ಅರಿವೇ ಇರಲಿಲ್ಲ ಎನ್ನಲಾಗಿದೆ.
ಮೃತ ವ್ಯಕ್ತಿಯನ್ನು ಕಿಶನ್ ಮೋಹನ್ ಶುಕ್ಲಾ ಎಂದು ಗುರುತಿಸಲಾಗಿದ್ದು, ಅವರು ದಿನಗೂಲಿಯಾಗಿದ್ದರು ಎನ್ನಲಾಗಿದೆ. ಅವರ ಕೋಣೆಯಿಂದ ದುರ್ನಾತ ಬರುತ್ತಿರುವುದನ್ನು ಗಮನಿಸಿದ ಇತರ ಬಾಡಿಗೆದಾರರು, ಈ ಕುರಿತು ಕಿಶನ್ ಮೋಹನ್ ಅವರ ಸಹೋದರ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಮನೆಯ ಬಳಿ ಧಾವಿಸಿರುವ ಪೊಲೀಸರು, ಬಾಗಿಲಿನ ಚಿಲಕ ತೆರೆದಾಗ, ಕಿಶನ್ ಮೋಹನ್ ಶುಕ್ಲಾ ಅವರ ಮೃತದೇಹ ಕೋಣೆಯಲ್ಲಿ ಕಂಡು ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವಿವಾಹಿತನಾಗಿದ್ದ ಕಿಶನ್ ಅವರಿಗೆ ಮಾನಸಿಕ ಸಮಸ್ಯೆ ಇತ್ತು, ಹಾಗೂ ಏಕಾಂಗಿಯಾಗಿ ವಾಸಿಸುತ್ತಿದ್ದರು ಎಂಬ ಸಂಗತಿ ಪೊಲೀಸರಿಗೆ ತಿಳಿದು ಬಂದಿದೆ. ಅವರ ಪೋಷಕರು ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದರು ಎನ್ನಲಾಗಿದೆ.
ಸಾವಿನ ನಿಖರ ಕಾರಣ ಪತ್ತೆ ಹಚ್ಚಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.