×
Ad

ದಿಲ್ಲಿ| ಮೆಟ್ರೊ ನಿಲ್ದಾಣದ ಬಳಿ ಭಾರಿ ಬೆಂಕಿ ಅವಘಡ: ನೂರಾರು ಗುಡಿಸಲುಗಳು ಬೆಂಕಿಗಾಹುತಿ

ಓರ್ವ ಮೃತ್ಯು

Update: 2025-11-08 14:42 IST

Photo credit: PTI

ಹೊಸದಿಲ್ಲಿ: ದಿಲ್ಲಿಯ ರೋಹಿಣಿಯಲ್ಲಿನ ರಿಥಾಲ ಮೆಟ್ರೊ ನಿಲ್ದಾಣದ ಬಳಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ಸುಮಾರು 500 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.

ಈ ಬೆಂಕಿ ಅವಘಡದಲ್ಲಿ ಮುನ್ನಾ ಎಂಬ ವ್ಯಕ್ತಿ ಮೃತಪಟ್ಟಿದ್ದು, ರಾಜೇಶ್ ಎಂಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.

ಶುಕ್ರವಾರ ರಾತ್ರಿ ದಿಲ್ಲಿಯ ರೋಹಿಣಿ ಸೆಕ್ಷರ್-5 ಬಳಿಯ ರಿಥಾಲ ಮೆಟ್ರೊ ನಿಲ್ದಾಣದ ಬಳಿ ಇರುವ ಜಲ ಮಂಡಳಿ ಸಿಬ್ಬಂದಿಗಳ ವಸತಿ ಸಮುಚ್ಚಯದ ಬಳಿ ಹಲವು ಎಲ್ಪಿಜಿ ಸಿಲಿಂಡರ್ ಗಳು ಸ್ಫೋಟಗೊಂಡಿದ್ದರಿಂದ, ಭಾರಿ ಪ್ರಮಾಣದ ಬೆಂಕಿಯ ಜ್ವಾಲೆ ಆವರಿಸಿ, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಆ ಪ್ರದೇಶದಾದ್ಯಂತ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಸುದ್ದಿ ತಿಳಿಯುತ್ತಿದ್ದಂತೆಯೇ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಘಟನಾ ಸ್ಥಳದಿಂದ ಸ್ಥಳೀಯರನ್ನು ತೆರವುಗೊಳಿಸಿದ ಪೊಲೀಸರು, ಬೆಂಕಿಯ ಜ್ವಾಲೆ ಬೇರೆಡೆಗೆ ಹರಡುವುದನ್ನು ತಡೆಯಲು ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ.

ಮುಂಜಾನೆ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News