×
Ad

ಮಹಾರಾಷ್ಟ್ರದಲ್ಲಿ ಭಾರೀ ಹನಿಟ್ರ್ಯಾಪ್ ಹಗರಣ: 72ರಿಂದ 75ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಟ್ರ್ಯಾಪ್?

Update: 2025-07-19 09:15 IST

ಮುಂಬೈ: ಮಹಾರಾಷ್ಟ್ರದ ಆಡಳಿತವ್ಯವಸ್ಥೆಗೆ ತೀವ್ರ ತಲೆನೋವನ್ನುಂಟುಮಾಡಿರುವ ಭಾರೀ ಹನಿಟ್ರ್ಯಾಪ್ ಹಗರಣದ ಸುದ್ದಿ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ಹಗರಣದಲ್ಲಿ 72 ರಿಂದ 75 ಹಿರಿಯ ಸರ್ಕಾರಿ ಅಧಿಕಾರಿಗಳು, ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಸಿಲುಕಿರುವ ಸಾಧ್ಯತೆ ಇರುವುದಾಗಿ ಮಾಧ್ಯಮ ವರದಿಯ ಬೆನ್ನಲ್ಲೇ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯು ತನಿಖೆಗೆ ಒತ್ತಾಯಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ.

"ಇದು ಸಾಮಾನ್ಯ ಅಪರಾಧವಲ್ಲ. ಈ ಹಗರಣದಿಂದ ರಾಷ್ಟ್ರದ ಭದ್ರತೆಗೆ ಭಾರೀ ಅಪಾಯ ಉಂಟಾಗಬಹುದು. ಈ ಮೂಲಕ ರಹಸ್ಯ ದಾಖಲೆಗಳು ರಾಷ್ಟ್ರವಿರೋಧಿ ಶಕ್ತಿಗಳ ಕೈಗೆ ಹೋಗುವ ಅಪಾಯವಿದೆ. ಸರ್ಕಾರವು ತಕ್ಷಣ ತನಿಖೆ ಆರಂಭಿಸಬೇಕು" ಎಂದು ಅವರು ಒತ್ತಾಯಿಸಿದರು.

ವಿಧಾನಸಭೆಯ ಸ್ಪೀಕರ್ ರಾಹುಲ್ ನರ್ವೇಕರ್ ಈ ಕುರಿತಂತೆ ಸೂಕ್ತ ಪರಿಶೀಲನೆಗಾಗಿ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.

ಎನ್‌ಸಿಪಿ (ಎಸ್‌ಪಿ) ಪಕ್ಷದ ವಕ್ತಾರ ಮಹೇಶ್ ತಪಸೇ, ಈ ಹಗರಣವು ಮುಂಬೈ, ಥಾಣೆ, ಪುಣೆ ಮತ್ತು ನಾಸಿಕ್ ಸೇರಿದಂತೆ ಪ್ರಮುಖ ನಗರಗಳಲ್ಲಿ ವ್ಯಾಪಿಸಿರುವುದಾಗಿ ವರದಿಯಾಗಿದೆ. ಇದು ರಾಜ್ಯದ ಆಡಳಿತಕ್ಕೆ ಅಪಾಯವೊಡ್ಡಲಿದೆ. "ಉನ್ನತ ಹುದ್ದೆಯಲ್ಲಿರುವವರ ಖಾಸಗಿ ಜೀವನಕ್ಕೆ ಭದ್ರತೆ ಇಲ್ಲದಂತಾಗಿರುವ ಹನಿಟ್ರ್ಯಾಪ್ ಘಟನೆಯ ವರದಿಯ ಬಗ್ಗೆ ಸರ್ಕಾರವೇಕೆ ಮೌನ ತಾಳಿದೆ? ಗುಪ್ತಚರ ಇಲಾಖೆ ಈ ಪ್ರಕರಣದಲ್ಲಿ ಏಕೆ ವಿಫಲವಾಯಿತು?" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಈ ಜಾಲದ ಹಿಂದೆ ನಾಸಿಕ್ ಮೂಲದ ವ್ಯಕ್ತಿಯೊಬ್ಬನಿದ್ದು, ರಾಜಕೀಯ ಪಕ್ಷದ ಮಾಜಿ ಪದಾಧಿಕಾರಿ ಎಂಬ ಶಂಕೆ ವ್ಯಕ್ತವಾಗಿದೆ.

"ಶಂಕಿತರು ಮಹಿಳೆಯರ ಮೂಲಕ ಅಧಿಕಾರಿಗಳಲ್ಲಿ ವಿಶ್ವಾಸ ಬೆಳೆಸಿ, ನಂತರ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಅವರನ್ನು ಬ್ಲ್ಯಾಕ್‌ ಮೇಲ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ. ಇದು ಗಂಭೀರ ಅಪರಾಧ" ಎಂದು ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತ ವಿಜಯ್ ಕುಂಭಾರ್, ನಾಸಿಕ್‌ ನ ಐಷಾರಾಮಿ ಹೋಟೆಲ್‌ಗಳಲ್ಲಿ ಈ ಸಂಚು ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದು, ಮುಂಬೈನ ನಾಕಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ ಎಂದು ಉಲ್ಲೇಖಿಸಿದರು.

"ಮುಖ್ಯಮಂತ್ರಿ ಏಕೆ ಮೌನವಾಗಿದ್ದಾರೆ? ಗುಪ್ತಚರ ಇಲಾಖೆಯು ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ? ಈ ಘಟನೆಯು ನಿಜವಾಗಿದ್ದರೆ, ಅದು ತುಂಬಾ ನಾಚಿಕೆಯ ಸಂಗತಿ. ಸುಳ್ಳಾದರೆ, ವದಂತಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು", ಎಂದು ಅವರು ಆಗ್ರಹಿಸಿದ್ದಾರೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News