ಮ್ಯಾಚ್ ಫಿಕ್ಸಿಂಗ್ ಆರೋಪ | ಶ್ರೀಲಂಕಾದ ಮಾಜಿ ಸ್ಪಿನ್ನರ್ ಸಚಿತ್ರ ಸೇನನಾಯಕೆ ವಿಚಾರಣೆ ಆರಂಭ
PC : PTI
ಕೊಲಂಬೊ: ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ಸಚಿತ್ರ ಸೇನನಾಯಕೆ ವಿರುದ್ಧ 2020ರಲ್ಲಿ ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ವಿರೋಧಿ ಕಾನೂನಿನಡಿಯಲ್ಲಿ ಅಧಿಕೃತವಾಗಿ ಆರೋಪ ಹೊರಿಸಲಾಗಿದೆ.
40ರ ಹರೆಯದ ಸೇನಾನಾಯಕೆ 2012 ಹಾಗೂ 2016ರ ನಡುವೆ ಶ್ರೀಲಂಕಾ ಕ್ರಿಕೆಟ್ ತಂಡದ ಪರವಾಗಿ 74 ಪಂದ್ಯಗಳನ್ನು ಆಡಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ವೇಳೆ ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಇಬ್ಬರು ಆಟಗಾರರ ಮೇಲೆ ಪ್ರಭಾವಬೀರುವ ಮೂಲಕ ಅವರನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ ಆರೋಪ ಸೇನನಾಯಕೆಯ ಮೇಲೆ ಹೊರಿಸಲಾಗಿದೆ. ಈ ಪ್ರಕರಣದ ವಿಚಾರಣೆಯು ಹಂಬಂಟೋಟ ಹೈಕೋರ್ಟ್ ನಲ್ಲಿ ನಡೆಯಲಿದೆ.
ಸೆಪ್ಟಂಬರ್ 2023ರಲ್ಲಿ ಬಂಧಿಸಲ್ಪಟ್ಟಿರುವ ಸೇನನಾಯಕೆ ಪ್ರಸಕ್ತ ಜಾಮೀನಿನ ಮೇಲೆ ಹೊರಗಿದ್ದು, ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ನಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಪ್ರಕರಣಗಳನ್ನು ನಿಭಾಯಿಸಲು 2019ರಲ್ಲಿ ಜಾರಿಗೆ ತರಲಾದ ಕ್ರೀಡಾ ಸಂಬಂಧಿತ ಅಪರಾಧಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಇದು ಮೊದಲ ಪ್ರಕರಣವಾಗಿದೆ.
ತಪ್ಪಿತಸ್ಥರೆಂದು ಸಾಬೀತಾದರೆ ಸೇನನಾಯಕೆ 10 ವರ್ಷಗಳ ತನಕ ಜೈಲು ಶಿಕ್ಷೆ, 100 ಮಿಲಿಯನ್ ರೂಪಾಯಿಗಳ ದಂಡ(ಸುಮಾರು 333,000 ಡಾಲರ್)ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.