ಮಾಯಾವತಿ ಸಾಮಾಜಿಕ ಚಳುವಳಿಯ ಕತ್ತು ಹಿಸುಕಿದ್ದಾರೆ; ಮಾಜಿ ಲೋಕಸಭಾ ಸದಸ್ಯ ಉದಿತ್ ರಾಜ್
PC : NDTV
ಹೊಸದಿಲ್ಲಿ: ಮಾಯಾವತಿ ಸಾಮಾಜಿಕ ಚಳುವಳಿಯ ಕತ್ತು ಹಿಸುಕಿದ್ದಾರೆ. ಈಗ ಅವರ ಕತ್ತು ಹಿಸುಕುವ ಕಾಲ ಬಂದಿದೆ ಎಂದು ಲೋಕಸಭೆಯ ಮಾಜಿ ಸದಸ್ಯ ಉದಿತ್ ರಾಜ್ ಹೇಳಿದ್ದಾರೆ.
ಲಕ್ನೋದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್, ಮಹಾಭಾರತ ಯುದ್ಧದ ಸಂದರ್ಭ ಅರ್ಜುನ ಕೃಷ್ಣನಲ್ಲಿ ತನ್ನ ಸೋದರ ಸಂಬಂಧಿ ಹಾಗೂ ಸಂಬಂಧಿಕರನ್ನು ಕೊಲ್ಲುವುದು ಹೇಗೆ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಕೃಷ್ಣ ಇಲ್ಲಿ ಸೋದರ ಸಂಬಂಧಿ ಹಾಗೂ ಸಂಬಂಧಿಕರು ಯಾರೂ ಇಲ್ಲ. ನ್ಯಾಯಕ್ಕಾಗಿ ಹೋರಾಟ. ನಿನ್ನವರನ್ನೇ ಕೊಲ್ಲು ಎಂದು ಹೇಳುತ್ತಾನೆ.
‘‘ಇಂದು ನನ್ನ ಕೃಷ್ಣ ಹೇಳಿದ್ದಾನೆ, ಮೊದಲು ನಿನ್ನ ವೈರಿಯನ್ನು ಕೊಲ್ಲು ಎಂದು. ಸಾಮಾಜಿಕ ನ್ಯಾಯದ ಶತ್ರುವಾಗಿರುವ ಮಾಯಾವತಿ ಸಾಮಾಜಿಕ ಚಳುವಳಿಯ ಕತ್ತು ಹಿಸುಕಿದ್ದಾರೆ. ಈಗ ಅವರ ಕತ್ತು ಹಿಸುಕುವ ಕಾಲ ಬಂದಿದೆ’’ ಎಂದು ಅವರು ಹೇಳಿದ್ದಾರೆ.
ತನ್ನ ಹೇಳಿಕೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಾಜ್, ಬಹುಜನ ಸಮುದಾಯದ ಚಳುವಳಿ ಹಸಿವೆ ಹಾಗೂ ಬಾಯಾರಿಕೆಯ ನಡುವೆಯೂ ಪಕ್ಷ ಕಟ್ಟಿದ ಕೋಟ್ಯಂತರ ಕಾರ್ಯಕರ್ತರ ಕತ್ತು ಹಿಸುಕಿದೆ ಎಂದು ಕೂಡ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ನನ್ನಲ್ಲಿ ಪ್ರಶ್ನೆ ಕೇಳಿದರೆ, ಮಾಯಾವತಿ ಅವರನ್ನು ಕೂಡ ರಾಜಕೀಯವಾಗಿ ಕತ್ತು ಹಿಸುಕಬೇಕೆಂದು ನಾನು ಖಂಡಿತವಾಗಿ ಹೇಳುತ್ತೇನೆ. ಅಂದರೆ, ಇದರ ಅರ್ಥ ರಾಜಕೀಯ ನಾಶ ಅಲ್ಲದೆ ಬೇರೇನೂ ಅಲ್ಲ ಎಂದು ಅವರು ಹೇಳಿದ್ದಾರೆ.
ಎಲ್ಲವನ್ನೂ ತಿರುಚುವುದು ಸರಿಯಲ್ಲ. ಪ್ರಜಾಪ್ರಭುತ್ವದ ರಾಜಕೀಯ ಸಾವು ಅಥವಾ ಹತ್ಯೆ ರಾಜಕೀಯ ಪ್ರಸ್ತಾವದ ಸಂದರ್ಭ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಇದನ್ನು ಲಘುವಾಗಿ ತೆಗೆದುಕೊಳ್ಳಬೇಕು ಎಂದು ರಾಜ್ ಹೇಳಿದ್ದಾರೆ.