ಸೋದರಳಿಯ ಆಕಾಶ್ ರನ್ನು ಬಿಎಸ್ಪಿಯ ಮುಖ್ಯ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ ಮಾಯಾವತಿ
File Photo: PTI
ಹೊಸದಿಲ್ಲಿ: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷಕ್ಕೆ ಮರಳಿ ಕರೆತಂದ ಒಂದು ತಿಂಗಳ ನಂತರ ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ.
ಮುಖ್ಯ ರಾಷ್ಟ್ರೀಯ ಸಂಯೋಜಕರಾಗಿರುವ ಆನಂದ್ ಅವರ ಕೆಳಗೆ ಮೂರು ರಾಷ್ಟ್ರೀಯ ಸಂಯೋಜಕರು ಕಾರ್ಯನಿರ್ವಹಿಸಲಿದ್ದಾರೆ.
ಈ ಹುದ್ದೆಯನ್ನು ವಿಶೇಷವಾಗಿ ಆನಂದ್ ಗಾಗಿ ರಚಿಸಲಾಗಿದೆ, ಈ ಹುದ್ದೆಯ ಮೂಲಕ ಅವರು ಪಕ್ಷದ ಎರಡನೇ ಮುಖ್ಯಸ್ಥರ ಸ್ಥಾನ ಅಲಂಕರಿಸಲಿದ್ದಾರೆ.
ಆನಂದ್ ಅವರಿಗೆ ಬಡ್ತಿ ನೀಡುವ ನಿರ್ಧಾರವನ್ನು ಮಾಯಾವತಿ ಅವರು ರವಿವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪಕ್ಷದ ಸಂಯೋಜಕರ ಸಭೆಯಲ್ಲಿ ತೆಗೆದುಕೊಂಡರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಆನಂದ್, ಬಿಎಸ್ಪಿ ಸಾಂಸ್ಥಿಕ ವ್ಯವಸ್ಥೆಗೆ ತಮ್ಮನ್ನು ಮರಳಿ ಕರೆತಂದಿದ್ದಕ್ಕಾಗಿ ಮಾಯಾವತಿಗೆ ಧನ್ಯವಾದ ಅರ್ಪಿಸಿದರು.
"ಬೆಹೆನ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಅವರು ನನ್ನ ತಪ್ಪುಗಳನ್ನು ಕ್ಷಮಿಸಿದ್ದಾರೆ ಮತ್ತು ಬಹುಜನ ಧ್ಯೇಯ ಮತ್ತು ಚಳುವಳಿಯನ್ನು ಬಲಪಡಿಸುವಲ್ಲಿ ಕೊಡುಗೆ ನೀಡಲು ನನಗೆ ಅವಕಾಶ ನೀಡಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.
ಆನಂದ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರ ಮತ್ತು ಮಾಯಾವತಿಯನ್ನು ತಮ್ಮ ಏಕೈಕ ರಾಜಕೀಯ ಗುರು ಎಂದು ಪರಿಗಣಿಸುವುದಾಗಿ ಪ್ರತಿಪಾದಿಸಿದ ನಂತರ ಕಳೆದ ತಿಂಗಳು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.