×
Ad

ವೈದ್ಯಕೀಯ ವಿದ್ಯಾರ್ಥಿನಿ ಶಹನಾ ಆತ್ಮಹತ್ಯೆ ಪ್ರಕರಣ, ವರದಕ್ಷಿಣೆ ಕಿರುಕುಳ ಆರೋಪ: ಕೇರಳ ವೈದ್ಯನ ಬಂಧನ

Update: 2023-12-07 22:29 IST

ರುವಾಯಿಸ್ ,ಶಹನಾ | Photo: NDTV 

ತಿರುವನಂತಪುರ: ತಿರುವನಂತಪುರ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ಶಹನಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಸ್ನಾತಕೋತ್ತರ ವೈದ್ಯಕೀಯ ಪದವೀಧರರ ಸಂಘ (ಕೆಎಂಪಿಜಿಎ)ದ ಮಾಜಿ ಅಧ್ಯಕ್ಷ ಡಾ.ಇ.ಎ.ರುವಾಯಿಸ್ ಅವರನ್ನು ಕೇರಳ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದು, ಅವರ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ರುವಾಯಿಸ್ ಅವರು ಶಹನಾರನ್ನು ವಿವಾಹವಾಗಲಿದ್ದರು.

ಡಿಸೆಂಬರ್ 4ರಂದು ಶಹನಾ ಅವರು ತಿರುವನಂತಪುರದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ರುವಾಯಿಸ್ ಅವರ ಮನೆಯವರ ವರದಕ್ಷಿಣೆ ಬೇಡಿಕೆಗಳ ಹಿನ್ನೆಲೆಯಲ್ಲಿ ಶಹನಾ ಅವರು ಭಾವನಾತ್ಮಕ ಉದ್ವೇಗಕ್ಕೊಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು. ಜನರು ಕೇವಲ ಹಣದ ಬಗ್ಗೆಯೇ ಚಿಂತಿಸುತ್ತಿದ್ದಾರೆ ಎಂದು ಶಹನಾ ಅವರದ್ದೆನ್ನಲಾದ ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು. ಆದರೆ ವರದಕ್ಷಿಣೆ ಕಿರುಕುಳದ ಬಗ್ಗೆ ಅದರಲ್ಲಿ ಯಾವುದೇ ಪ್ರಸ್ತಾವ ಮಾಡಿರಲಿಲ್ಲ. ಅಲ್ಲದೆ ಯಾರ ಹೆಸರುಗಳನ್ನೂ ಕೂಡಾ ಅವರು ಡೆತ್ ನೋಟ್ ನಲ್ಲಿ ಉಲ್ಲೇಖಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ವರನ ಕಡೆಯವರ ವರದಕ್ಷಿಣೆಯ ಬೇಡಿಕೆಗಳನ್ನು ಈಡೇರಿಸಲು ತನ್ನ ಕುಟುಂಬಕ್ಕೆ ಸಾಧ್ಯವಾಗದೆಂದು ಶಹನಾ, ರುವಾಯಿಸ್ ಗೆ ಹೇಳಿದ ಬಳಿಕ ಆತ ಮದುವೆಯಾಗುವುದರಿಂದ ಹಿಂದೆ ಸರಿದನೆಂದು ಶಹನಾ ಅವರ ತಾಯಿ ಹಾಗೂ ಸೋದರಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರುವಾಯಿಸ್ ಅವರನ್ನು ಕೊಲ್ಲಂನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಯಿತು. ವಿಪರ್ಯಾಸವೆಂದರೆ, ವೈದ್ಯರುಗಳ ವಿರುದ್ಧ ಮಾನವಹಕ್ಕುಗಳ ಉಲ್ಲಂಘನೆ ಕುರಿತ ಸಭೆಯೊಂದರಲ್ಲಿ ರುವಾಯಿಸ್ ಶೀಘ್ರದಲ್ಲೇ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲಿದ್ದು, ಅದಕ್ಕಿಂತ ಕೆಲವೇ ದಿನಗಳ ಮೊದಲು ಆತನ ಬಂಧನವಾಗಿದೆ.         

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News