ವಿಶ್ವದ ಅತ್ಯಂತ ತೇವಾಂಶ ಪ್ರದೇಶ ಮೇಘಾಲಯದ ಸೊಹ್ರಾದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ!
Photo Credit: The Hindu
ಸೊಹ್ರಾ (ಮೇಘಾಲಯ): ಭೂಮಿಯ ಮೇಲಿನ ಅತ್ಯಂತ ತೇವಾಂಶ ಪ್ರದೇಶ ಎಂದೇ ಪರಿಗಣಿತವಾಗಿರುವ ಮೇಘಾಲಯದ ಸೊಹ್ರಾದಲ್ಲಿ ಈ ವರ್ಷದ ಜೂನ್ ತಿಂಗಳಲ್ಲಿ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ, ವಾಡಿಕೆಗಿಂತ ಕೇವಲ ಮೂರನೆ ಒಂದು ಭಾಗ ಮಾತ್ರ ಮಳೆಯಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ, ಹವಾಮಾನ ಬದಲಾವಣೆಯಿಂದಾಗುತ್ತಿರುವ ಪ್ರತಿಕೂಲ ಪರಿಣಾಮಗಳ ಕುರಿತ ಕಳವಳ ಮತ್ತಷ್ಟು ಗಂಭೀರ ಸ್ವರೂಪಕ್ಕೆ ತಿರುಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಚಿರಾಪುಂಜಿ ಎಂದೂ ಕರೆಯಲಾಗುವ ಸೊಹ್ರಾದಲ್ಲಿ ಈ ವರ್ಷದ ಜೂನ್ ತಿಂಗಳಲ್ಲಿ ಕೇವಲ 1,095.4 ಮಿಮೀ ಮಳೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಆಗಿದ್ದ 3,041.2 ಮಿಮೀ ಮಳೆಗೆ ಹೋಲಿಸಿದರೆ, ಇದು ತೀವ್ರ ಕುಸಿತವಾಗಿದೆ.
ಈ ಪ್ರಾಂತ್ಯದಲ್ಲಿ ವರ್ಷದಿಂದ ವರ್ಷಕ್ಕೆ ಆಗುತ್ತಿರುವ ಮಳೆ ಇಳಿಕೆ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿಯ ಕುಸಿತ ತೀವ್ರ ಸ್ವರೂಪದ್ದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
“ಇದು ತೀವ್ರ ಕಳವಳಕಾರಿಯಾಗಿದೆ. ಸೊಹ್ರಾ ಈ ವರ್ಷ ಅಸಹಜ ಮಳೆಗೆ ಸಾಕ್ಷಿಯಾಯಿತು. ಆದರೆ, ಜೂನ್ ತಿಂಗಳಲ್ಲಿನ ಈ ತೀವ್ರ ಕುಸಿತ ಅಪಾಯಕಾರಿಯಾಗಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸೊಹ್ರಾದಲ್ಲಿ ಮೇ ತಿಂಗಳಲ್ಲಿ ಸುರಿದಿರುವ ಮಳೆಯ ಪ್ರಮಾಣ ಕೂಡಾ ಸಮಾಧಾನಕರವಾಗಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ವರ್ಷದ ಮೇ ತಿಂಗಳಲ್ಲಿ ಕೇವಲ 400 ಮಿಮೀ ಮಳೆ ಆಗಿದೆ. ಇದು ಈ ಪ್ರಾಂತ್ಯದಲ್ಲಿ ಆಗಿರುವ ಅತ್ಯಂತ ಕನಿಷ್ಠ ಮಳೆ ಪ್ರಮಾಣ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.