ಪಿಎನ್ ಬಿ ಹಗರಣ ಪ್ರಕರಣ | ಮೆಹುಲ್ ಚೋಕ್ಸಿಗೆ ಬೆಲ್ಜಿಯಂನಲ್ಲಿ ಕ್ಯಾನ್ಸರ್ ಚಿಕಿತ್ಸೆ
ಮೆಹುಲ್ ಚೋಕ್ಸಿ | PC : deccanherald.com \ Special Arrangement
ಮುಂಬೈ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ, ಕ್ಯಾನ್ಸರ್ ಗಾಗಿ ಬೆಲ್ಜಿಯಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಮೆಹುಲ್ ಚೋಕ್ಸಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ವಿಜಯ್ ಅಗರ್ವಾಲ್, ಮೆಹುಲ್ ಚೋಕ್ಸಿಯ ಕೆಲವು ಆರೋಗ್ಯ ಸಮಸ್ಯೆಗಳನ್ನು ನ್ಯಾಯಾಲಯದ ಗಮನಕ್ಕೆ ತರಲು ಅರ್ಜಿ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದರು. ಇದೇ ವೇಳೆ, ಮೆಹುಲ್ ಚೋಕ್ಸಿ ಚಿಕಿತ್ಸೆಗಾಗಿ ಸದ್ಯ ಬೆಲ್ಜಿಯಂನಲ್ಲಿದ್ದಾರೆ ಎಂದೂ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಮೆಹುಲ್ ಚೋಕ್ಸಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಮೆಹುಲ್ ಚೋಕ್ಸಿಯನ್ನು ದೇಶ ಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂಬೈನಲ್ಲಿರುವ ಅಕ್ರಮ ಹಣ ವರ್ಗಾವಣೆ ಕಾಯ್ದೆ ನ್ಯಾಯಾಲಯ ನಡೆಸುತ್ತಿದೆ.
ದೇಶ ಭ್ರಷ್ಟ ಆರ್ಥಿಕ ಅಪರಾಧಿ ಎಂಬ ಘೋಷಣೆಯು ಅಪರಾಧಿಯ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮಕ್ಕೆ ಚಾಲನೆ ನೀಡಲು ಸರಕಾರಕ್ಕೆ ಅವಕಾಶ ನೀಡುತ್ತದೆ.
ಮೆಹುಲ್ ಚೋಕ್ಸಿ ಮತ್ತೊಬ್ಬ ದೇಶ ಭ್ರಷ್ಟ ವಜ್ರೋದ್ಯಮಿ ನೀರವ್ ಮೋದಿಯ ಸೋದರ ಸಂಬಂಧಿಯಾಗಿದ್ದಾರೆ. 2018ರಲ್ಲಿ ಮುಂಬೈನಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಬ್ರಾಡಿ ಹೌಸ್ ಶಾಖೆಯಲ್ಲಿ ಸಾಲ ಹಗರಣ ನಡೆಸಿದ ಆರೋಪದ ಮೇಲೆ ಮೆಹುಲ್ ಚೋಕ್ಸಿ ಹಾಗೂ ಅವರ ಕುಟುಂಬದ ಸದಸ್ಯರು, ಉದ್ಯೋಗಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದವು.
2018ರಲ್ಲಿ ಭಾರತದಿಂದ ಪರಾರಿಯಾದ ನಂತರ, ಮೆಹುಲ್ ಚೋಕ್ಸಿ ಆ್ಯಂಟಿಗುವಾದಲ್ಲಿ ನೆಲೆಸಿದ್ದಾರೆ.