×
Ad

ಇಂಫಾಲ ಸಿಇಓ, ಜಿಎಸ್‍ಐ ಕಚೇರಿಗಳಿಗೆ ಬೀಗ ಜಡಿದ ಮೈತೈ ಪ್ರತಿಭಟನಾಕಾರರು

Update: 2025-05-28 08:47 IST

PC | timesofindia

ಇಂಫಾಲ : ಕಳೆದವಾರ ಬೆಟ್ಟ ಉತ್ಸವಕ್ಕೆ ತೆರಳುತ್ತಿದ್ದ ಸರ್ಕಾರ ಬಸ್ಸಿನ ಫಲಕದಲ್ಲಿದ್ದ "ಮಣಿಪುರ" ಎಂಬ ಶಬ್ದವನ್ನು ತೆಗೆಸಿದ ಆರೋಪದಲ್ಲಿ ಉಂಟಾಗಿರುವ ವಿವಾದ ಉದ್ವಿಗ್ನ ಸ್ವರೂಪ ಪಡೆದಿದ್ದು, ಪ್ರತಿಭಟನಾಕಾರರು ಮಂಗಳವಾರ ಎರಡು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದಿದ್ದಾರೆ. ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಕಳೆದ ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿತ್ತು.

ಮೈತೈ ಸಮುದಾಯದ ಪ್ರಾತಿನಿಧಿಕ ಸಂಘಟನೆಯಾದ ಕೊಕೊಮಿ ಕಾರ್ಯಕರ್ತರು ಲಂಫೇಲ್‍ ಪಾತ್‍ನಲ್ಲಿರುವ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ಧಾವಿಸಿ ಬೀಗ ಜಡಿಯುವ ಮುನ್ನ ಎಲ್ಲ ಸಿಬ್ಬಂದಿ ಹೊರಹೋಗುವಂತೆ ಸೂಚಿಸಿದರು. ಅಂತೆಯೇ ಒಂದು ಕಿಲೋಮೀಟರ್ ದೂರದಲ್ಲಿದ್ದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಕಚೇರಿಯನ್ನೂ ಮುಚ್ಚಿದರು. ರಾಜ್ಯಪಾಲ ಎ.ಕೆ.ಭಲ್ಲಾ ಕ್ಷಮೆ ಯಾಚಿಸಬೇಕು ಅಥವಾ ಮಣಿಪುರ ತೊರೆಯಬೇಕು ಎಂಬ ಘೋಷಣೆಗಳನ್ನು ಕೂಗಿದರು. ಭದ್ರತಾ ಪಡೆಯ ಸಿಬ್ಬಂದಿಯ ಸಂಖ್ಯೆಯನ್ನು ಮೀರಿದ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮಂಗಳವಾರ ಪಾಲ್ಗೊಂಡಿದ್ದರು.

ಉಖ್ರುಲ್ ಜಿಲ್ಲೆಯಲ್ಲಿ ನಡೆಯುವ ಶಿರೂಲಿ ಲಿಲಿ ಉತ್ಸವಕ್ಕೆ ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಮಣಿಪುರ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಮೇ 20ರಂದು ಗ್ವಾಲ್ಟಬಿ ಚೆಕ್‍ ಪಾಯಿಂಟ್‍ನಲ್ಲಿ ತಡೆದು, ಬಸ್ಸಿನ ಫಲಕದಿಂದ ಮಣಿಪುರ ಶಬ್ದವನ್ನು ಅಳಿಸುವಂತೆ ಸೂಚಿಸಲಾಗಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯಪಾಲರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ಕೊಕೊಮಿ ಸಂಘಟನೆಯು ಸೋಮವಾರ ಅಗತ್ಯ ಸೇವೆಗಳಾದ ಆರೋಗ್ಯ, ಶಿಕ್ಷಣ, ಕ್ರೀಡೆ ಮತ್ತು ಬ್ಯಾಂಕಿಂಗ್ ಹೊರತುಪಡಿಸಿ ಎಲ್ಲ ಕೇಂದ್ರ ಕಚೇರಿಗಳನ್ನು ಮುಚ್ಚುವ ನಿಧಾರವನ್ನು ಕೈಗೊಂಡಿತ್ತು.

ಮಂಗಳವಾರ ರಾಜ್ಯಪಾಲರ ಕ್ಷಮೆಯಾಚನೆಗೆ ಆಗ್ರಹಿಸಿ ಮಾನವ ಸರಪಳಿ ನಡೆಸಲಾಯಿತು. ಬಿಷ್ಣುಪುರ ಜಿಲ್ಲೆಯಲ್ಲೂ ಇಂಥದ್ದೇ ಪ್ರತಿಭಟನೆ ನಡೆದಿದ್ದು, ವಿವಿಧ ನಾಗರಿಕ ಸಂಘ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಈ ಚಳವಳಿಗೆ ಬೆಂಬಲ ಸೂಚಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News