×
Ad

ವಿದೇಶಿ ದೇಣಿಗೆ ಸ್ವೀಕರಿಸಲು ಅಯೋಧ್ಯೆ ರಾಮಮಂದಿರದ ಟ್ರಸ್ಟ್ ಗೆ ಕೇಂದ್ರದ ಹಸಿರು ನಿಶಾನೆ

Update: 2023-10-19 23:25 IST

ಹೊಸದಿಲ್ಲಿ: ಸಾವಿರಾರು ಎನ್‌ ಜಿ ಓಗಳಿಗೆ ವಿದೇಶಿ ದೇಣಿಗೆ ಸ್ವೀಕರಿಸುವುದಕ್ಕೆ ನಿಷೇಧ ವಿಧಿಸಿರುವ ನಡುವೆಯೇ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ವಿದೇಶಿ ಮೂಲಗಳಿಂದ ದೇಣಿಗೆಗಳನ್ನು ಸ್ವೀಕರಿಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಕೇಂದ್ರ ಗೃಹಸಚಿವಾಲಯವು ಅನುಮೋದನೆ ನೀಡಿದೆ. ಇಂತಹ ದೇಣಿಗೆಗಳನ್ನು ದಿಲ್ಲಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯ ಶಾಖೆಯಲ್ಲಿರುವ ಟ್ರಸ್ಟ್ ನ ನಿಯೋಜಿತವಾದ ಖಾತೆಗೆ ಕಳುಹಿಸಬಹುದಾಗಿದೆಯೆಂದು ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಗುರುವಾರ ತಿಳಿಸಿದ್ದಾರೆ.

‘‘ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಭಾರತ ಸರಕಾರದ ಗೃಹ ಸಚಿವಾಲಯದ FCRA (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ) ಇಲಾಖೆಯು 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಸ್ವಯಂಪ್ರೇರಿತ ದೇಣಿಗೆಗಳನ್ನು ಸ್ವೀಕರಿಸಲು ಅನುಮೋದನೆ ನೀಡಿದೆ’’ ಎಂದು ಚಂಪತ್ರಾಯ್ ಅವರು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು, ಎನ್‌ ಜಿ ಓಗಳಿಗೆ FCRA ಪರವಾನಗಿಗಳನ್ನು ನೀಡುತ್ತದೆ. ವಿದೇಶಿ ನಿಧಿ ಅಥವಾ ದೇಣಿಗೆಗಳನ್ನು ಸ್ವೀಕರಿಸಬೇಕಾದರೆ ಅವು FCRA ಕಾಯ್ದೆಯಡಿ ನೋಂದಾಯಿಸಿಕೊಂಡಿರಬೇಕಾಗುತ್ತದೆ. ಒಂದು ವೇಳೆ ಯಾವುದೇ ವಿದೇಶಿ ನಿಧಿಗಳ ದುರ್ಬಳಕೆ ಅಥವಾ ಬೇರೆಡೆಗೆ ತಿರುಗಿಸಲು ಯತ್ನಿಸಿದಲ್ಲಿ, ಅದನ್ನು FCRA ಕಾಯ್ದೆಯ ಉಲ್ಲಂಘನೆಯೆಂದು ಪರಿಗಣಿಸಬಹುದು.

ಇದಕ್ಕೂ ಮೊದಲು, ನಾಲ್ಕು ಜನಪ್ರಿಯ ಲಾಭೋದ್ದೇಶ ರಹಿತ ಸಂಸ್ಥೆಗಳಾದ, ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, ಓಕ್ಸ್ಫಾಮ್ ಇಂಡಿಯಾ, ನೀತಿ ಸಂಶೋಧನಾ ಕೇಂದ್ರ ಹಾಗೂ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ಗಳಿಗೆ ನೀಡಲಾಗಿದ್ದ FCRA ಪರವಾನಗಿಗಳನ್ನು ರದ್ದುಪಡಿಸಲಾಗಿತ್ತು. ಕಡೆಗಣಿಸಲ್ಪಟ್ಟ ವರ್ಗಗಳ ಕಲ್ಯಾಣಕ್ಕಾಗಿ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News