×
Ad

ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದ ಸಚಿವ ಅನಿಲ್ ವಿಜ್: ನಿರ್ಗಮಿತ ಸಿಎಂ ಹೇಳಿದ್ದೇನು?

Update: 2024-03-13 09:26 IST

Photo: Ndtv

ಚಂಡೀಗಢ: ಬಿಜೆಪಿಯ ಹಿರಿಯ ಮುಖಂಡ ಹಾಗೂ ಮನೋಹರ್ ಲಾಲ್ ಖಟ್ಟರ್ ಸಂಪುಟದಲ್ಲಿ ಗೃಹಸಚಿವರಾಗಿದ್ದ ಅನಿಲ್ ವಿಜ್, ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿದದ್ದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಇದಕ್ಕೂ ಮುನ್ನ ಸೈನಿಯವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಿಂದ ವಿಜ್ ಹೊರ ನಡೆದಿದ್ದರು.

ಡಿಸಿಎಂ ಹುದ್ದೆಯ ರೇಸ್ ನಲ್ಲಿ ವಿಜ್ ಹೆಸರು ಇತ್ತೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಗಮಿತ ಸಿಎಂ ಖಟ್ಟರ್, "ನೂತನ ಸಂಪುಟದಲ್ಲಿ ವಿಜ್ ಅವರ ಹೆಸರು ಕೂಡಾ ಇತ್ತು. ಅವರು ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಸ್ವೀಕರಿಸಲಿಲ್ಲ" ಎಂದು ಸ್ಪಷ್ಟಪಡಿಸಿದರು.

"ನಾನು ಅವರೊಂದಿಗೆ ಮಾತನಾಡಿದ್ದೇನೆ. ಆದರೆ ಅವರಿಗೆ ಸಮಾರಂಭಕ್ಕೆ ಬರುವ ಮನಸ್ಸು ಇರಲಿಲ್ಲ. ನಾವು ಮತ್ತೆ ಮಾತನಾಡುತ್ತೇವೆ. ನಯಾಬ್ ಸೈನಿ ಕೂಡ ಅವರ ಜತೆ ಮಾತನಾಡಲಿದ್ದಾರೆ" ಎಂದು ತಿಳಿಸಿದರು.

ಖಟ್ಟರ್ ಅವರ ಅಧಿಕಾರಾವಧಿ ಅಕ್ಟೋಬರ್ ಗೆ ಮುಗಿಯಬೇಕಿತ್ತು. ರಾಜ್ಯ ವಿಧಾನಸಭಾ ಚುನಾವಣೆ ಅಕ್ಟೋಬರ್ ನಲ್ಲಿ ನಡೆಯಲಿದ್ದು, ಇದಕ್ಕೆ ಮುನ್ನ ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದ ಶಾಸಕರಾದ ತಮ್ಮನ್ನು ಕಡೆಗಣಿಸಿ, ಸೈನಿಯವರನ್ನು ಸಿಎಂ ಆಗಿ ನೇಮಕ ಮಾಡಿರುವ ಕ್ರಮ ವಿಜ್ ಅವರನ್ನು ಕೆರಳಿಸಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಮತ್ತು ಆ ಬಳಿಕ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ವಿಜ್ ಖಾಸಗಿ ವಾಹನದಲ್ಲಿ ತಮ್ಮ ಅಂಬಾಲಾ ನಿವಾಸಕ್ಕೆ ತೆರಳಿದರು. 2014ರಲ್ಲಿ ಕೂಡಾ ಸೈನಿ ಸಿಎಂ ಹುದ್ದೆಯ ರೇಸ್ ನ ಮುಂಚೂಣಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News