ಏರ್ ಇಂಡಿಯಾ ವಿಮಾನ ದುರಂತ | ಅಮೆರಿಕ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿದ ನಾಗರಿಕ ವಿಮಾನಯಾನ ಸಚಿವ
Photo | indiatoday
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಪೈಲಟ್‌ಗಳ ಮೇಲೆ ಆರೋಪ ಹೊರಿಸಲು ಪ್ರಯತ್ನಿಸಿದ ಪಾಶ್ಚಿಮಾತ್ಯ ಮಾಧ್ಯಮಗಳ ನಿರೂಪಣೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಟೀಕಿಸಿದ್ದಾರೆ. ವಿಮಾನ ದುರಂತಗಳ ಕುರಿತು ತನಿಖೆ ನಡೆಸುವ ಜವಾಬ್ದಾರಿಯುತ ಸಂಸ್ಥೆಯಾದ ಎಎಐಬಿ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ನಾನು ಎಎಐಬಿಯನ್ನು ನಂಬುತ್ತೇನೆ. ಅವರು ಭಾರತದಲ್ಲಿ ದತ್ತಾಂಶವನ್ನು ಡಿಕೋಡ್ ಮಾಡುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇದು ದೊಡ್ಡ ಯಶಸ್ಸಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಎಎಐಬಿಯ ಪ್ರಾಥಮಿಕ ವರದಿಯ ಬಗ್ಗೆ ಶ್ಲಾಘಿಸಿದರು.
ಪೈಲಟ್ ದೋಷವನ್ನು ಸೂಚಿಸುವ ವರದಿಗಳಿಗಾಗಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಅನ್ನು ಸಚಿವ ರಾಮ್ ಮೋಹನ್ ನಾಯ್ಡು ಟೀಕಿಸಿದ್ದಾರೆ.
ಅಂತಿಮ ವರದಿ ಪ್ರಕಟವಾಗುವ ಮೊದಲು ಊಹಾಪೋಹಗಳನ್ನು ಹರಡಬಾರದು. ಅಂತಿಮ ವರದಿ ಬರುವ ಮೊದಲು ಯಾರ ಪರವಾಗಿಯೂ ಯಾವುದೇ ಕಾಮೆಂಟ್‌ಗಳನ್ನು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ನಾವು ಜಾಗರೂಕರಾಗಿದ್ದೇವೆ. ಘಟನೆ ಕುರಿತು ಅಂತಿಮ ವರದಿ ಹೊರಬರುವವರೆಗೆ ಕಾಯಬೇಕಿದೆ ಎಂದು ಹೇಳಿದರು.
ಈ ಹಿಂದೆ ಡೇಟಾವನ್ನು ಹೊರತೆಗೆಯಲು ಬ್ಲ್ಯಾಕ್ ಬಾಕ್ಸ್‌ನ್ನು ಯಾವಾಗಲೂ ವಿದೇಶಕ್ಕೆ ಕಳುಹಿಸಲಾಗುತ್ತಿತ್ತು. ಭಾರತದಲ್ಲಿ ಡೇಟಾವನ್ನು ಡಿಕೋಡ್ ಮಾಡಿರುವುದು ಇದೇ ಮೊದಲು ಎಂದು ಸಚಿವ ರಾಮ್ ಮೋಹನ್ ನಾಯ್ಡು ಹೇಳಿದರು.