×
Ad

ಮಿಝೋರಾಂ | ಉದ್ಯೋಗ ಖಾಯಂಗೊಳಿಸುವಂತೆ ಆಗ್ರಹಿಸಿ 15 ಸಾವಿರಕ್ಕೂ ಅಧಿಕ ಸಿಎಸ್‌ಎಸ್ ಉದ್ಯೋಗಿಗಳಿಂದ ಪ್ರತಿಭಟನೆ

Update: 2025-09-16 21:33 IST

 ಸಾಂದರ್ಭಿಕ ಚಿತ್ರ

ಐರೆಲ, ಸೆ. 17: ತಮ್ಮ ಉದ್ಯೋಗವನ್ನು ಖಾಯಂಗೊಳಿಸಬೇಕೆಂಬ ಬಹು ಕಾಲದ ಬೇಡಿಕೆಯನ್ನು ಈಡೇರಿಸುವಂತೆ ಮಿಝೋರಾಂ ಸರಕಾರವನ್ನು ಆಗ್ರಹಿಸಿ ಮಿಝೋರಾಂನ ‘ಸೆಂಟ್ರಲಿ ಸ್ಪಾನ್ಸರ್ಡ್‌ ಸ್ಕೀಮ್’ (ಸಿಎಸ್‌ಎಸ್) ಅಡಿಯಲ್ಲಿ ಕೆಲಸ ಮಾಡುತ್ತಿರುವ 15 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮಂಗಳವಾರ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿದರು.

ರಾಜ್ಯ ವ್ಯಾಪಿ ಆಯೋಜಿಸಲಾಗಿದ್ದ ಪ್ರತಿಭಟನೆಯ ನೇತೃತ್ವವನ್ನು ಆಲ್ ಮಿಝೋರಾಂ ಸಿಎಸ್‌ಎಸ್ ಎಂಪ್ಲಾಯ್ಸ್ ಕೋ-ಆರ್ಡಿನೇಷನ್ ಕಮಿಟಿ (ಎಎಂಸಿಇಸಿಸಿ) ವಹಿಸಿತ್ತು.

ಉದ್ಯೋಗಿಗಳು ಐರೆಲ ಹಾಗೂ ಕೆಲವು ಪ್ರಮುಖ ಪಟ್ಟಣಗಳು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದರು ಎಂದು ಎಎಂಸಿಇಸಿಸಿಯ ಪ್ರಧಾನ ಕಾರ್ಯದರ್ಶಿ ವನಲಾಲ್‌ ಪೆಕಾ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್ 18ರಂದು ಹೊರಡಿಸಲಾದ ಅಧಿಸೂಚನೆ ‘‘ಮಿಝೋರಾಂ ರೈಗ್ಯುಲರೈಸೇಷನ್ ಆಫ್ ಸಿಎಸ್‌ಎಸ್ ಎಂಪ್ಲಾಯಿಸ್ ಸ್ಕೀಮ್’’ ಅನ್ನು ಅನುಷ್ಠಾನಗೊಳಿಸುವಂತೆ ಹಾಗೂ ಸಿಎಸ್‌ಎಸ್ ಯೋಜನೆ ಆಧಾರದಲ್ಲಿ ರಾಜ್ಯದ ಆರೋಗ್ಯ ಇಲಾಖೆ ಅಡಿಯಲ್ಲಿ ಮಾಡಲಾದ ಸುಮಾರು 31 ಮಂದಿ ಉದ್ಯೋಗಿಗಳ ತಾತ್ಕಾಲಿಕ ನೇಮಕಾತಿಯನ್ನು ರದ್ದುಗೊಳಿಸುವಂತೆ ಸಿಎಸ್‌ಎಸ್ ಉದ್ಯೋಗಿಗಳು ಆಗ್ರಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ನಾವು ಖಾಯಂಗೊಳಿಸುವ ಯೋಜನೆಯ ಅನುಷ್ಠಾನಕ್ಕೆ ಕಾಯುತ್ತಿರುವಾಗ, ರಾಜ್ಯ ಸರಕಾರ ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಜ್ಞಾಪನಾ ಪತ್ರ ಹೊರಡಿಸಿ ನಾವು ಪೂರೈಸಲಾಗದ ಹಲವು ನಿಬಂಧನೆಗಳು ವಿಧಿಸಿದೆ. ಈ ನಿಯಮಗಳು ನಮ್ಮ ಖಾಯಮಾತಿಗೆ ಅಡ್ಡಿ ಆಗುತ್ತಿದೆ’’ ಎಂದು ವನಲಾಲ್‌ಪೆಕಾ ಅವರು ತಿಳಿಸಿದ್ದಾರೆ.

ಹಲವು ಉದ್ಯೋಗಿಗಳು ಕಳೆದ 25 ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅರ್ಹ ಉದ್ಯೋಗಿಗಳನ್ನು ಖಾಯಂಗೊಳಿಸುವಂತೆ ಅವರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ, ಸರಕಾರ ಅವರತ್ತ ಗಮನ ಹರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News