×
Ad

ಕೇವಲ ಖಾನ್ ಹೆಸರಿಗಾಗಿ ಅಶೋಕ ವಿವಿ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆಯೇ?: ಸರಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

Update: 2025-05-19 12:52 IST

ಅಲಿ ಖಾನ್ ಮಹ್ಮದಾಬಾದ್ (Photo credit: ashoka.edu.in)

ಹೊಸದಿಲ್ಲಿ: ʼಆಪರೇಷನ್ ಸಿಂಧೂರ್ʼ ಕುರಿತ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಗಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ

ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಹೇಳಿಕೆ ನೀಡಿದ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ಅವು ಪ್ರಶ್ನಿಸಿವೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರೊಫೆಸರ್ ವಿರುದ್ಧದ ತ್ವರಿತ ಪೊಲೀಸ್ ಕ್ರಮ ಮತ್ತು ಮಧ್ಯಪ್ರದೇಶ ಸಚಿವರ ವಿರುದ್ಧದ ನಿಧಾನಗತಿಯ ತನಿಖೆಯ ನಡುವೆ ಹೋಲಿಕೆಯನ್ನು ಉಲ್ಲೇಖಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದಾರೆ.

"ಅಧಿಕಾರದಲ್ಲಿರುವವರು ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಂತರವೂ ಸ್ವತಂತ್ರರು ಮತ್ತು ಸತ್ಯವನ್ನು ಮಾತನಾಡಿದವರನ್ನು ಬಂಧಿಸಲಾಗಿದೆ,” ಎಂದ ಅಖಿಲೇಶ್ ಯಾದವ್ ತಮ್ಮ ಪೋಸ್ಟ್ ನಲ್ಲಿ ಸರಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ , ಫ್ರೊ. ಖಾನ್ ಅವರ ಬಂಧನ ಕ್ರಮವನ್ನು ಟೀಕಿಸಿದೆ. "ಇದು ಮೋದಿ ಸರ್ಕಾರದ ಅಡಿಯಲ್ಲಿ ನವ ಭಾರತದ ಸ್ಥಿತಿ" ಎಂದು ಅದು ಪ್ರತಿಕ್ರಿಯಿಸಿದೆ.

" ಹಿಂಸೆಯನ್ನು ಪ್ರಚೋದಿಸಿದ್ದಕ್ಕಾಗಿ ಅಲ್ಲ, ಅದರ ವಿರುದ್ಧ ಪ್ರತಿಪಾದಿಸಿದ್ದಕ್ಕಾಗಿ ಒಬ್ಬ ಇತಿಹಾಸಕಾರ ಮತ್ತು ಶಿಕ್ಷಣ ತಜ್ಞರನ್ನು ಜೈಲಿಗೆ ಹಾಕಲಾಗಿದೆ. ಅವರು ಮಾಡಿದ ಅಪರಾಧವಾದರೂ ಏನು? ಸತ್ಯವನ್ನು ಮಾತನಾಡಲು ಧೈರ್ಯ ಮಾಡಿದ್ದು, ಬಿಜೆಪಿಯ ಸಿನಿಕತನದ ಕೋಮುವಾದಿ ನಿರೂಪಣೆಯನ್ನು ಬಹಿರಂಗಪಡಿಸಿದ್ದು? ಬೂಟಾಟಿಕೆಯ ರಾಷ್ಟ್ರೀಯತೆಯನ್ನು ಪ್ರಶ್ನಿಸಿದ್ದು? ಸಶಸ್ತ್ರ ಪಡೆಗಳನ್ನು ಬಹಿರಂಗವಾಗಿ ಅವಮಾನಿಸಿದ ಬಳಿಕವೂ ಬಿಜೆಪಿ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ. ಬಂಧನವೂ ಆಗಿಲ್ಲ. ಇದು ಮೋದಿ ಆಡಳಿತದ ದ್ವಂದ್ವ ನೀತಿಯಾಗಿದೆ" ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.

"ಇದು ಪ್ರಶ್ನೆಗಳಿಗೆ ಹೆದರುವ, ತನ್ನದೇ ಆದ ಜನರಿಗೆ ಭಯಪಡುವ ಸರ್ಕಾರ. ಬರಹಗಾರರು, ಪ್ರಾಧ್ಯಾಪಕರು ಮತ್ತು ವಿಮರ್ಶಕರನ್ನು ಶತ್ರುಗಳೆಂದು ಕರೆದಾಗ, ಪ್ರಜಾಪ್ರಭುತ್ವವೇ ನಿಜವಾದ ಶತ್ರು. ಅವರ ಏಕೈಕ ತಪ್ಪು ಅವರು ಈ ಪೋಸ್ಟ್ ಬರೆದಿರುವುದು. ಅವರ ಇನ್ನೊಂದು ತಪ್ಪು ಅವರ ಹೆಸರು" ಎಂದು ಖೇರಾ ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News