×
Ad

ಭಾರತದ ಪ್ರಪ್ರಥಮ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿ ಮಿಜೋರಾಂ ಘೋಷಣೆ

Update: 2025-05-21 14:05 IST

ಮಿಜೋರಾಂ ಮುಖ್ಯಮಂತ್ರಿ ಲಾಲ್ಡುಹೋಮಾ (Photo: X/@CMOMizoram)

ಐಝೌಲ್: ಮಿಜೋರಾಂ ಭಾರತದ ಪ್ರಪ್ರಥಮ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ ಎಂದು ಮಂಗಳವಾರ ಮಿಜೋರಾಂ ಮುಖ್ಯಮಂತ್ರಿ ಲಾಲ್ಡುಹೋಮಾ ಘೋಷಿಸಿದ್ದಾರೆ. ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಜಯಂತ್ ಚೌಧರಿ ಸಮ್ಮುಖದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ‌.

2011ರ ಜನಗಣತಿಯ ಪ್ರಕಾರ, ಮಿಜೋರಾಂನ ಸಾಕ್ಷರತಾ ಪ್ರಮಾಣ ಶೇ. 91.3ರಷ್ಟಿತ್ತು. ಇದು ಮಿಜೋರಾಂ ರಾಜ್ಯವನ್ನು ಇಡೀ ದೇಶದ ಮೂರನೆಯ ಅತಿ ಹೆಚ್ಚು ಸಾಕ್ಷರತಾ ರಾಜ್ಯವನ್ನಾಗಿಸಿತ್ತು.

ಇದರ ಬೆನ್ನಿಗೆ, ಉಳಿದ ಜನರಿಗೆ ಶಿಕ್ಷಣ ನೀಡಲು ಕೇಂದ್ರೀಕೃತ ಪ್ರಾಯೋಜಿತ ಯೋಜನೆಯಾದ ನೂತನ ಭಾರತ ಸಾಕ್ಷರತಾ ಯೋಜನೆಯನ್ನು ಜಾರಿಗೊಳಿಸಲಾಗಿತ್ತು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

ಸದ್ಯ ಮಿಜೋರಾಂನ ಸಾಕ್ಷರತಾ ಪ್ರಮಾಣ ಶೇ. 95ರ ಗಡಿಯನ್ನು ದಾಟಿದ್ದು, ಇದು ಸಂಪೂರ್ಣ ಸಾಕ್ಷರತೆಗೆ ಸಮಾನವೆಂದು ಕೇಂದ್ರ ಶಿಕ್ಷಣ ಸಚಿವಾಲಯ ಪರಿಗಣಿಸಿದೆ.

ಈ ಕುರಿತು ಮಂಗಳವಾರ ಮಾತನಾಡಿದ ಮಿಜೋರಾಂ ಮುಖ್ಯಮಂತ್ರಿ ಲಾಲ್ಡುಹೋಮಾ, ಮಿಜೋರಾಂನ ಈ ಪಯಣದಲ್ಲಿ ರಾಜ್ಯವು ಸಂಪೂರ್ಣ ಸಾಕ್ಷರತಾ ರಾಜ್ಯವಾಗಿ ಹೊರಹೊಮ್ಮಿರುವುದು ಐತಿಹಾಸಿಕ ಕ್ಷಣವಾಗಿದೆ. ಇದು ಪರಿವರ್ತನೀಯ ಮೈಲಿಗಲ್ಲಾಗಿದ್ದು, ಜನರ ಸಾಮೂಹಿಕ ಇಚ್ಛಾಶಕ್ತಿ, ಶಿಸ್ತು ಹಾಗೂ ದೂರದೃಷ್ಟಿಯ ಕುರಿತು ಮಾತನಾಡುತ್ತಿದೆ" ಎಂದು ಶ್ಲಾಘಿಸಿದ್ದಾರೆ.

ನಿರಂತರ ಶಿಕ್ಷಣ, ಡಿಜಿಟಲ್ ಪ್ರವೇಶ ಹಾಗೂ ರಜಾದಿನಗಳ ಕೌಶಲ ತರಬೇತಿಯ ಮೂಲಕ, ರಾಜ್ಯದಲ್ಲಿನ ಈ ಅತ್ಯಧಿಕ ಮಟ್ಟದ ಸಾಕ್ಷರತಾ ಪ್ರಮಾಣವನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.

"ನಾವೀಗ ಎಲ್ಲ ಮಿಜೋರಾಂ ನಾಗರಿಕರ ಡಿಜಿಟಲ್ ಸಾಕ್ಷರತೆ, ಹಣಕಾಸು ಸಾಕ್ಷರತೆ ಹಾಗೂ ಔದ್ಯಮಿಕ ಕೌಶಲದಂಥ ದೊಡ್ಡ ಗುರಿಗಳತ್ತ ಕಣ್ಣು ನೆಡೋಣ" ಎಂದೂ ಅವರು ಕಿವಿಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News