×
Ad

ಅಸ್ಸಾಂ | ಕಾಂಗ್ರೆಸ್ ಸಂಸದನ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು

Update: 2025-02-21 14:44 IST

Photo:X

ಗುವಾಹಟಿ: ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಸಂಸದ ರಕೀಬುಲ್ ಹುಸೈನ್ ಹಾಗೂ ಅವರ ಭದ್ರತಾ ಅಧಿಕಾರಿಗಳ ಮೇಲೆ ಮುಸುಕು ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಗುರುವಾರ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮುಖಕ್ಕೆ ಕಪ್ಪು ಬಟ್ಟೆ ಸುತ್ತಿಕೊಂಡಿದ್ದ ದುಷ್ಕರ್ಮಿಗಳ ಗುಂಪೊಂದು ಹುಸೈನ್ ಬೆಂಗಾವಲು ಪಡೆಯೊಂದಿಗೆ ಘರ್ಷಣೆ ನಡೆಸಿ, ಕಪ್ಪು ಬಾವುಟವನ್ನು ಪ್ರದರ್ಶಿಸಿತು. ನಂತರ, ದೈಹಿಕ ಹಲ್ಲೆ ನಡೆಸಿತು ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಹುಸೈನ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಅವರ ಇಬ್ಬರು ಭದ್ರತಾ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ದಾಳಿಕೋರರನ್ನು ಚದುರಿಸಲು ಹಾಗೂ ಹುಸೈನ್ ರ ಸುರಕ್ಷತೆಯನ್ನು ಖಾತರಿಗೊಳಿಸಲು ಭದ್ರತಾ ಸಿಬ್ಬಂದಿಗಳು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೊದಲ್ಲಿ ಸಂಸದ ಹುಸೈನ್ ಸ್ಕೂಟರ್ ನಲ್ಲಿ ಪರಾರಿಯಾಗಲು ಯತ್ನಿಸಿದಾಗ, ಅವರ ಮೇಲೆ ಕ್ರಿಕೆಟ್ ಬ್ಯಾಟ್ ಗಳಿಂದ ದಾಳಿ ನಡೆಸಲು ಯತ್ನಿಸಿರುವುದು ಸೆರೆಯಾಗಿದೆ.

ತಮ್ಮ ಮೇಲಿನ ಹಲ್ಲೆಯನ್ನು ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಬೆದರಿಕೆ ಒಡ್ಡುವ ಪ್ರಯತ್ನ ಎಂದು ಬಣ್ಣಿಸಿರುವ ಸಂಸದ ಹುಸೈನ್, ತಮ್ಮ ಬೆಂಬಲಿಗರಿಗೆ ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ. ಈ ನಡುವೆ, ಭದ್ರತಾ ಲೋಪದ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಘಟನೆ ಅವರ ಸ್ವಂತ ಸ್ಥಳದಲ್ಲೇ ನಡೆದಿದ್ದು, ಇಂತಹ ಘಟನೆಗಳು ತುಂಬಾ ದಿನಗಳಿಂದ ನಡೆಯುತ್ತಿವೆ ಎಂದು ಹೇಳಿದ್ದು, ಸಂಸದರ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News