×
Ad

ಆರ್ಥಿಕ ಹಿತಾಸಕ್ತಿಗಳ ರಕ್ಷಣೆಯ ಸವಾಲು ಎದುರಾದರೂ ಶೇ.7.8 ಜಿಡಿಪಿ ಬೆಳವಣಿಗೆ: ಮೋದಿ

Update: 2025-09-02 20:41 IST

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ,ಸೆ.2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಸರಕುಗಳ ಮೇಲೆ ಶೇ.50ರಷ್ಟು ಆಮದು ಸುಂಕ ವಿಧಿಸಿರುವುದನ್ನು ಮಂಗಳವಾರ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಆರ್ಥಿಕ ಸ್ವಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸವಾಲುಗಳು ಎದುರಾಗಿರುವ ಹೊರತಾಗಿಯೂ ಪ್ರಸಕ್ತ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.7.8ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸಿಮೆಕಾನ್ ಇಂಡಿಯಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ಆರ್ಥಿಕತೆಯು ಪ್ರತಿಯೊಂದು ನಿರೀಕ್ಷೆ, ಅಂದಾಜು ಹಾಗೂ ಮುನ್ಸೂಚನೆಯನ್ನು ಮೀರಿ ಸಾಧನೆ ಮಾಡಿದೆ ಎಂದರು.

ಆರ್ಥಿಕ ಸ್ವಹಿತಾಸಕ್ತಿಯಿಂದಾಗಿ ಜಗತ್ತಿನಾದ್ಯಂತದ ಆರ್ಥಿಕತೆಗಳು ಆತಂಕ ಹಾಗೂ ಸವಾಲುಗಳಳನ್ನು ಎದುರಿಸುತ್ತಿರುವ ಹೊರತಾಗಿಯೂ ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆ ಸಾಧಿಸಿದೆ ಎಂದರು.

ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನದ ಅಂದಾಜು ಬೆಳವಣಿಗೆ ದರವು ಶೇ.6.5 ಆಗಿದ್ದರೂ ಶೇ.7.8ರಷ್ಟು ಬೆಳವಣಿಗೆಯನ್ನು ಕಂಡಿದೆ.ಇದು ಕಳೆದ ವರ್ಷ ಇದೇ ಅವಧಿಯಲ್ಲಿದ್ದುದಕ್ಕಿಂತ ಶೇ.1.3ರಷ್ಟು ಅಧಿಕವೆಂದು ಪ್ರಧಾನಿ ಹೇಳಿದರು.

ಉತ್ಪಾದನೆ, ಸೇವೆಗಳು,ಕೃಷಿ ಹಾಗೂ ಕಟ್ಟಡನಿರ್ಮಾಣ ಸೇರಿದಂತೆ ಎಲ್ಲಾ ವಲಯಗಳಲ್ಲಿ ಭಾರತವು ಬೆಳವಣಿಗೆಯನ್ನು ಕಂಡಿದ್ದು, ಎಲ್ಲೆಡೆಯೂ ಉತ್ಸಾಹದ ವಾತಾವರಣ ಕಂಡುಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಭಾರತದ ಆರ್ಥಿಕತೆ ನಿರ್ಜೀವವಾಗಿದೆ ಎಂಬ ಟ್ರಂಪ್ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತ್ಯುತ್ತರ ನೀಡಿದ ಮೋದಿ ಅವರು, ‘ಆರ್ಥಿಕ ಬೆಳವಣಿಗೆಯ ಪಥವು ಮೇಲ್ಮುಖವಾಗಿ ಸಾಗುತ್ತಿದ್ದು, ಭಾರತವು ತ್ವರಿತವಾಗಿ ಜಗತ್ತಿನ ಮೂರನೇ ಆತಿ ದೊಡ್ಡ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿದೆ ’ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News