×
Ad

ಮೋದಿ ಸರಕಾರವು ಅದಾನಿಯನ್ನು ರಕ್ಷಿಸಲು ಅಮೆರಿಕದ ಜೊತೆಗಿನ ಸಂಬಂಧಗಳನ್ನು ಪಣಕ್ಕೊಡ್ಡಿದೆ : ಕಾಂಗ್ರೆಸ್

Update: 2024-12-09 20:57 IST

PC : @INCIndia/X

ಹೊಸದಿಲ್ಲಿ : ತನ್ನ ನಾಯಕರು ಅಮೆರಿಕನ್ ಹೂಡಿಕೆದಾರ ಜಾರ್ಜ್ ಸೊರೊಸ್ ಜೊತೆ ಕೈಜೋಡಿಸಿದ್ದಾರೆ ಎಂಬ ಬಿಜೆಪಿಯ ಆರೋಪಗಳನ್ನು ಸೋಮವಾರ ತಳ್ಳಿಹಾಕಿರುವ ಕಾಂಗ್ರೆಸ್,ಕೇವಲ ಗೌತಮ ಅದಾನಿಯನ್ನು ರಕ್ಷಿಸಲು ಸರಕಾರವು ಇನ್ನೊಂದು ದೇಶದೊಂದಿಗಿನ ಭಾರತದ ಸಂಬಂಧಗಳನ್ನೂ ಪಣಕ್ಕಿಟ್ಟಿದೆ ಎನ್ನುವುದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಯಲಾಗುತ್ತಿರುವ ನಿಜವಾದ ಷಡ್ಯಂತ್ರವಾಗಿದೆ ಎಂದು ಹೇಳಿದೆ.

ಅದಾನಿಗೆ ‘ಎಂ(ಮೋದಿ)’ ಭದ್ರತೆಯನ್ನು ಒದಗಿಸಲಾಗಿದೆ ಮತ್ತು ಅದನ್ನು ಉಲ್ಲಂಘಿಸಲು ಪ್ರಜಾಪ್ರಭುತ್ವದ ‘ಮೃತದೇಹ’ವನ್ನು ದಾಟಬೇಕಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಸಂಸತ್ ಅಧಿವೇಶನ ಆರಂಭಗೊಂಡಾಗಿನಿಂದಲೂ ನಾವು ವಿಷಯಗಳನ್ನೆತ್ತಲು ಪ್ರಯತ್ನಿಸುತ್ತಿದ್ದೇವೆ,ಆದರೆ ಪ್ರಧಾನಿ ಸಹಿಸಲಾಗದ ಒಂದು ವಿಷಯವಿದೆ ಮತ್ತು ನಾವು ಆ ವಿಷಯವನ್ನು ಎತ್ತಿದಾಗ ಅವರು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಆ ಒಂದು ಹೆಸರು ಅದಾನಿ. ನಾವು ಆ ಹೆಸರನ್ನು ತೆಗೆದುಕೊಂಡ ತಕ್ಷಣ ಪ್ರಧಾನಿ ಗಲಿಬಿಲಿಗೊಳ್ಳುತ್ತಾರೆ ’ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ ಖೇರಾ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

‘ಓರ್ವ ವ್ಯಕ್ತಿಗಾಗಿ ರಾಷ್ಟ್ರವೊಂದರ ಜೊತೆ ನಮ್ಮ ಸಂಬಂಧವನ್ನು ಪಣಕ್ಕಿಡುವ ಹಕ್ಕು ಯಾರಿಗೂ ಇಲ್ಲ. ಈ ಕೈಗಾರಿಕೋದ್ಯಮಿಗೆ ನೆರವಾಗುವ ದೇಶಗಳಿಗೆ,ಅವು ನಮ್ಮ ಗಡಿಗಳೊಳಗೆ ಪ್ರವೇಶಿಸಿದ್ದರೂ, ಅವುಗಳಿಗೆ ಕ್ಲೀನ್ ಚಿಟ್ ನೀಡಲಾಗುತ್ತದೆ ಮತ್ತು ಕೈಗಾರಿಕೋದ್ಯಮಿ ವಿರುದ್ಧ ತನಿಖೆ ನಡೆಸುವ ದೇಶಗಳನ್ನು ಷಡ್ಯಂತ್ರದ ಭಾಗವಾಗಿವೆ ಎಂದು ಆರೋಪಿಸಲಾಗುತ್ತಿದೆ. ಇದು ಯಾವ ರೀತಿಯ ವಿದೇಶಾಂಗ ನೀತಿ?’ ಎಂದು ಖೇರಾ ಚೀನಾದ ಅತಿಕ್ರಮಣಗಳು ಮತ್ತು ಅದಾನಿ ವಿರುದ್ಧ ಅಮೆರಿಕದ ದೋಷಾರೋಪವನ್ನು ಉಲ್ಲೇಖಿಸಿ ಹೇಳಿದ್ದಾರೆ.

ಸಂಸತ್ತಿನ ಅಧಿವೇಶನ ಆರಂಭಗೊಂಡಾಗಿನಿಂದ ಓರ್ವ ವ್ಯಕ್ತಿಯನ್ನು ರಕ್ಷಿಸಲು ಸರಕಾರವು ಇತರ ದೇಶಗಳೊಂದಿಗಿನ ಭಾರತದ ಸಂಬಂಧಗಳನ್ನೂ ಪಣಕ್ಕೊಡ್ಡುತ್ತಿದೆ ಎನ್ನುವುದನ್ನು ಈ ಷಡ್ಯಂತ್ರವು ಬಯಲಾಗಿಸುತ್ತಿದೆ ಎಂದು ಆರೋಪಿಸಿರುವ ಖೇರಾ, ಈ ಪಿತೂರಿ 2002ರ ಸುಮಾರಿಗೆ ಆರಂಭಗೊಂಡಿತ್ತು. ಆಗ ಒಂದು ರಾಜ್ಯಕ್ಕೆ ಸೀಮಿತಗೊಂಡಿತ್ತು, ಆದರೆ 2014ರಿಂದ ಈಗ ಇದು ಅಂತರರಾಷ್ಟ್ರೀಯ ಪಿತೂರಿಯಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News