×
Ad

ದತ್ತಾಂಶ ಸಂರಕ್ಷಣೆ ಹೆಸರಲ್ಲಿ ಆರ್‌ಟಿಐ ಕಾಯ್ದೆ ದುರ್ಬಲಗೊಳಿಸಿದ ಮೋದಿ ಸರಕಾರ: ಖರ್ಗೆ

Update: 2025-03-04 21:34 IST

ಮಲ್ಲಿಕಾರ್ಜನ ಖರ್ಗೆ | PC : PTI

ಹೊಸದಿಲ್ಲಿ: ದತ್ತಾಂಶ ಸಂರಕ್ಷಣೆ ಹೆಸರಲ್ಲಿ ಮಾಹಿತಿ ಹಕ್ಕು (ಆರ್‌ಟಿಐ)ಕಾಯ್ದೆಯನ್ನು ಮೋದಿ ಸರಕಾರ ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.

ಜನರ ಹಕ್ಕುಗಳನ್ನು ಸಂರಕ್ಷಿಸಲು ಸರ್ವಾಧಿಕಾರಿ ಆಡಳಿತದ ವಿರುದ್ಧ ತಮ್ಮ ಪಕ್ಷ ನಿರಂತರ ಹೋರಾಡಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ದುರ್ಬಲವಾಗಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಹಾಗೂ ಬೀದಿಯಿಂದ ಸಂಸತ್ತಿನವರೆಗೆ ತನ್ನ ಧ್ವನಿಯನ್ನು ನಿರಂತರ ಎತ್ತಲಿದೆ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

ಒಂದೆಡೆ ಭಾರತ ಕಳೆದ ಕೆಲವು ವರ್ಷಗಳಿಂದ ತಪ್ಪು ಮಾಹಿತಿ ನೀಡುವ ದೇಶಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನೊಂದೆಡೆ ದತ್ತಾಂಶ ಸಂರಕ್ಷಣೆ ಕಾಯ್ದೆ ಜಾರಿಗೆ ತರುವ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅನುಷ್ಠಾನಗೊಳಿಸಿದ ಮಾಹಿತಿ ಹಕ್ಕು (ಆರ್‌ಟಿಐ)ಕಾಯ್ದೆಯನ್ನು ದುರ್ಬಲಗೊಳಿಸಲು ಮೋದಿ ಸರಕಾರ ಹೊರಟಿದೆ ಎಂದು ಖರ್ಗೆ ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪಡಿತರ ಚೀಟಿ, ಎಂಜಿಎನ್‌ಆರ್‌ಇಜಿಎ ಫಲಾನುಭವಿ ಕಾರ್ಮಿಕರು, ಸಾರ್ವಜನಿಕ ಕಲ್ಯಾಣ ಯೋಜನೆಗಳಲ್ಲಿ ಒಳಗೊಂಡ ಜನರ ಹೆಸರುಗಳ ಪಟ್ಟಿ, ಚುನಾವಣೆಗಳಲ್ಲಿ ಮತದಾರರ ಪಟ್ಟಿಯಂತಹ ಸಾರ್ವಜನಿಕ ವಲಯದಲ್ಲಿನ ಮಾಹಿತಿಯಾಗಿರಲಿ ಅಥವಾ ಸರಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ವಂಚಕ ಕೋಟ್ಯಧಿಪತಿಗಳ ಹೆಸರುಗಳೇ ಆಗಿರಲಿ-ಈ ಎಲ್ಲಾ ಹೆಸರುಗಳು ಜನರಿಗೆ ಸಾರ್ವಜನಿಕ ವಲಯದಲ್ಲಿ ಲಭ್ಯವಾಗುವುದು ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದರೆ, ಈಗ ಮೋದಿ ಸರಕಾರ ದತ್ತಾಂಶ ಸಂರಕ್ಷಣೆ ಹೆಸರಿನಲ್ಲಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ದುರ್ಬಲಗೊಳಿಸಿದೆ. ಇದರಿಂದಾಗಿ ಅಂತಹ ಹೆಸರುಗಳು ಎಂದಿಗೂ ಬಹಿರಂಗವಾಗುವುದಿಲ್ಲ ಎಂದು ಖರ್ಗೆ ಪ್ರತಿಪಾದಿಸಿದರು.

ಖಾಸಗೀತನದ ಹಕ್ಕು ಮೂಲಭೂತ ಹಕ್ಕು ಹಾಗೂ ಕಾಂಗ್ರೆಸ್ ಇದಕ್ಕಾಗಿ ಹೋರಾಡಿದೆ. ಆದರೆ, ಸಾರ್ವಜನಿಕ ಕಲ್ಯಾಣದ ವಿಷಯಕ್ಕೆ ಬಂದಾಗ ಮಾಹಿತಿ ಹಕ್ಕು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಜಾರಿಗೆ ತಂದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಲ್ಲಿ ಖಾಸಗೀತನದ ಹಕ್ಕು ಕೂಡ ಸೇರಿದೆ. ಆದರೆ, ಇದರ ಅರ್ಥ ಫಲಾನುಭವಿಗಳು ಹಾಗೂ ವಂಚಕರ ಹೆಸರನ್ನು ಬಹಿರಂಗಗೊಳಿಸಬಾರದು ಎಂದಲ್ಲ ಎಂದು ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News