ಈಗಾಗಲೇ ವಿಳಂಬಗೊಂಡಿರುವ ಜನಗಣತಿಯೊಂದಿಗೆ ಕೇಂದ್ರ ಸರಕಾರ ಘೋಷಿಸಿರುವ ಜಾತಿಗಣತಿಗೆ ಯಾವುದೇ ಕಾಲಮಿತಿಯಿಲ್ಲ: ವರದಿ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಈಗಾಗಲೇ ವಿಳಂಬಗೊಂಡಿರುವ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಘೋಷಿಸಿದೆಯಾದರೂ, ಈ ಕುರಿತು ಯಾವುದೇ ವೇಳಾಪಟ್ಟಿ ಅಥವಾ ಕಾಲಮಿತಿಯನ್ನು ನಿಗದಿಗೊಳಿಸದೆ ಇರುವುದರಿಂದ, ಈ ಗಣತಿ ಅಂತಿಮವಾಗಿ ಎಂದಿನಿಂದ ಪ್ರಾರಂಭಗೊಳ್ಳಲಿದೆ ಎಂಬ ಕುರಿತು ಜನರಲ್ಲಿ ಪ್ರಶ್ನೆಗಳು ಮೂಡಿವೆ ಎಂದು deccanherald.com ವರದಿ ಮಾಡಿದೆ.
ಇದಕ್ಕೂ ಮುನ್ನ, 2021ರಲ್ಲಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಜನಗಣತಿಯನ್ನು ಕೋವಿಡ್-19 ಸಾಂಕ್ರಾಮಿಕದ ಕಾರಣಕ್ಕೆ ಮುಂದೂಡಲಾಗಿತ್ತು ಹಾಗೂ ಈ ಜನಗಣತಿಗಾಗಿ ಇದುವರೆಗೆ ಯಾವುದೇ ಹೊಸ ವೇಳಾಪಟ್ಟಿಯನ್ನು ನಿಗದಿಪಡಿಸಿಲ್ಲ. ಅಲ್ಲದೆ, 2025-26ರ ಬಜೆಟ್‌ನಲ್ಲಿ ಜನಗಣತಿಗಾಗಿ ಅತಿ ಕಡಿಮೆ ಮೊತ್ತ ಮೀಸಲಿಟ್ಟಿರುವುದರಿಂದ, ಈ ಜನಗಣತಿ ಮತ್ತಷ್ಟು ವಿಳಂಬವಾಗಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈಗಿನ ಹೊಸ ನಿರ್ಧಾರದಿಂದಾಗಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಜನಗಣತಿಯ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗುತ್ತದೆ ಹಾಗೂ ಈ ಜನಗಣತಿಯ ಪ್ರಶ್ನೆಯಲ್ಲಿ ಏನೆಲ್ಲ ಸೇರ್ಪಡೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈವರೆಗೆ ಜನಗಣತಿದಾರರಿಗೆ ತರಬೇತಿಯನ್ನೂ ನೀಡಲಾಗಿಲ್ಲ.
ಮೊದಲಿಗೆ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡಲಾಗುತ್ತದೆ ಹಾಗೂ ಎರಡನೆ ಹಂತದಲ್ಲಿ ನಾಗರಿಕರ ನೈಜ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ.