×
Ad

Uttar Pradesh | ರಾಮಮಂದಿರ ಸುತ್ತ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ

Update: 2026-01-10 07:50 IST

ರಾಮಮಂದಿರ | PC : PTI

ಲಕ್ನೋ: ಅಯೋಧ್ಯೆಯ  ರಾಮ ಮಂದಿರದ ಸುತ್ತ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆಯನ್ನು ಅಯೋಧ್ಯೆ ಜಿಲ್ಲಾ ಆಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ಅಯೋಧ್ಯೆ ಪಟ್ಟಣದ ‘ಪಾಂಚ್ ಕೋಸಿ ಪರಿಕ್ರಮಾ’ ವ್ಯಾಪ್ತಿಯಲ್ಲಿ ಆಹಾರ ವಿತರಣಾ ಸಂಸ್ಥೆಗಳು ಮಾಂಸಾಹಾರ ಪೂರೈಸುತ್ತಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಅಯೋಧ್ಯೆ ಪಟ್ಟಣದ ಹೋಟೆಲ್‌ಗಳು ಮತ್ತು ಹೋಮ್‌ಸ್ಟೇಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಅತಿಥಿಗಳಿಗೆ ಮಾಂಸಾಹಾರ ಹಾಗೂ ಮದ್ಯ ವಿತರಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಯೋಧ್ಯೆ ಸಹಾಯಕ ಆಹಾರ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಅವರು, “ಈಗಾಗಲೇ ನಿಷೇಧ ಜಾರಿಯಲ್ಲಿದ್ದರೂ, ಪ್ರವಾಸಿಗಳಿಗೆ ಆನ್‌ಲೈನ್ ಆರ್ಡರ್ ಮೂಲಕ ಮಾಂಸಾಹಾರ ಪೂರೈಕೆ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಇದನ್ನು ಗಮನಿಸಿ ಆನ್‌ಲೈನ್ ಮಾಂಸಾಹಾರ ವಿತರಣೆಯನ್ನೂ ನಿಷೇಧಿಸಲಾಗಿದೆ,” ಎಂದು ತಿಳಿಸಿದ್ದಾರೆ.

“ಎಲ್ಲ ಹೋಟೆಲ್‌ಗಳು, ಅಂಗಡಿಮಾಲೀಕರು ಹಾಗೂ ಆಹಾರ ವಿತರಣಾ ಕಂಪನಿಗಳಿಗೆ ನಿಷೇಧ ಆದೇಶದ ಬಗ್ಗೆ ಮಾಹಿತಿ ನೀಡಲಾಗಿದೆ. ಆದೇಶದ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಲು ಆಡಳಿತದಿಂದ ನಿರಂತರ ನಿಗಾ ವಹಿಸಲಾಗುವುದು,” ಎಂದು ಸಹಾಯಕ ಆಹಾರ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಅಯೋಧ್ಯೆ ಮಹಾನಗರ ಪಾಲಿಕೆ (ಎಎಂಸಿ) ಕಳೆದ ಮೇ ತಿಂಗಳಲ್ಲಿ ರಾಮಪಥ ಪ್ರದೇಶದಲ್ಲಿ ಅಂದರೆ ರಾಮ ಮಂದಿರದಿಂದ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿಷೇಧಿಸಿ ನಿಲುವಳಿ ಆಂಗೀಕರಿಸಿದ ನಡುವೆಯೂ ಇಪ್ಪತ್ತನಾಲ್ಕಕ್ಕೂ ಹೆಚ್ಚು ಲೈಸನ್ಸ್ ಪಡೆದ ಮದ್ಯದ ಅಂಗಡಿಗಳು ರಾಮಪಥದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News