×
Ad

ಎಎನ್ಐ, ಐಎಎನ್ಎಸ್ ಗಳಿಂದ ಕ್ರಿಕೆಟಿಗ ಶಮಿ ವಿರುದ್ಧ ವಿವಾದ ರೂಪಿಸುವ ಯತ್ನ : ಮುಹಮ್ಮದ್ ಝುಬೈರ್ ಆರೋಪ

Update: 2025-03-07 19:43 IST

ಹೊಸದಿಲ್ಲಿ: ದುಬೈಯಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಮೈದಾನದಲ್ಲಿ ಪಾನೀಯ ಕುಡಿಯುವ ಫೋಟೋ ಹಾಗು ವಿಡಿಯೋ ವೈರಲ್ ಆಗಿತ್ತು. ಮುಸ್ಲಿಮರು ದಿನವಿಡೀ ಉಪವಾಸ ಆಚರಿಸುವ ರಮಝಾನ್ ತಿಂಗಳಾದ್ದರಿಂದ ಈ ಫೋಟೋದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದ ಬೆನ್ನಿಗೇ ANI ಸುದ್ದಿ ಸಂಸ್ಥೆಯು ಶಹಾಬುದ್ದೀನ್ ಎಂಬ ಹೆಸರಿನ ಮೌಲ್ವಿ ಎಂದು ಹೇಳಿಕೊಳ್ಳುವ ಒಬ್ಬನ ವಿಡಿಯೋ ಹೇಳಿಕೆ ಪಡೆಯಿತು. ಅದರಲ್ಲಿ ಶಹಾಬುದ್ದೀನ್ ನೇರವಾಗಿ ಶಮಿ ಉಪವಾಸ ಆಚರಿಸದೇ ಇದ್ದಿದ್ದಕ್ಕೆ ಅವರ ವಿರುದ್ಧ ಫತ್ವಾ ಜಾರಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.  

ಶಮಿ ವಿರುದ್ಧ ಶಹಾಬುದ್ದೀನ್ ಕೊಟ್ಟ ಹೇಳಿಕೆಯನ್ನು ಎಲ್ಲ ಚಾನಲ್ ಗಳಿಗೆ ಹಂಚಿದ ಬಳಿಕ ANI ಇತರ ಹತ್ತು ಮಂದಿ ಬಳಿ ಹೋಗಿ ಅದೇ ಶಹಾಬುದ್ದೀನ್ ಹೇಳಿಕೆಗೆ ಪ್ರತಿಕ್ರಿಯೆ ಕೇಳಿ ಅವರ ಹೇಳಿಕೆ ಪಡೆಯಿತು. ಅವರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶಹಾಬುದ್ದೀನ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದರ ಬೆನ್ನಿಗೇ ಶಹಾಬುದ್ದೀನ್ ಎಂಬ ದೊಡ್ಡ ಮೌಲಾನಾ ಒಬ್ಬರು ಮೊಹಮ್ಮದ್ ಶಮಿ ವಿರುದ್ಧ ಫತ್ವಾ ಕೊಟ್ಟಿದ್ದಾರೆ, ದೇಶದ ತಂಡಕ್ಕಾಗಿ ಆಡುವಾಗ ಉಪವಾಸ ಆಚರಿಸದವರನ್ನು ಮುಸ್ಲಿಂ ಮೌಲ್ವಿಗಳು ಸಹಿಸೋದಿಲ್ಲ, ಇವರಿಗೆ ದೇಶಪ್ರೇಮ ಇಲ್ಲ ಎಂಬತಂಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೈರ್, "ಭಾರತೀಯ ಕ್ರಿಕೆಟಿಗ ಮುಹಮ್ಮದ್ ಶಮಿ ವಿರುದ್ಧ ಎಎನ್ಐ(ANI) ಮತ್ತು ಐಎಎನ್ಎಸ್(IANS) ಸುದ್ದಿ ಸಂಸ್ಥೆ ವಿವಾದ ರೂಪಿಸುವಲ್ಲಿ ನಿರತವಾಗಿದೆ" ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಹಮ್ಮದ್ ಝುಬೈರ್, ಎಎನ್ಐ ಮಾಡುತ್ತಿರುವುದು ಪತ್ರಿಕೋದ್ಯಮವಲ್ಲ, ಎಎನ್ಐ ಉದ್ದೇಶಪೂರ್ವಕವಾಗಿ ಶಹಾಬುದ್ದೀನ್ ಎಂಬ ವ್ಯಕ್ತಿಯಿಂದ ಹೇಳಿಕೆಯನ್ನು ಪಡೆದಿದೆ. ಶಹಾಬುದ್ದೀನ್ ಅವರು ಎಲ್ಲಾ ಭಾರತೀಯ ಮುಸ್ಲಿಮರ ಪ್ರತಿನಿಧಿ ಎಂದು ಹೇಳಿಕೊಂಡು ಶಮಿ ವಿರುದ್ಧ ಫತ್ವಾ ಹೊರಡಿಸಿದರು. ಶಹಾಬುದ್ದೀನ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಬೆಂಬಲಿಗರಾಗಿದ್ದಾರೆ ಎಂದು ಹೇಳಿದರು.

ಶಹಾಬುದ್ದೀನ್ ಬಳಿ ಆರಂಭಿಕ ಹೇಳಿಕೆಯನ್ನು ಪಡೆದ ನಂತರ, ಎಎನ್ಐ ವರದಿಗಾರರು ಶಹಾಬುದ್ದೀನ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಇತರ 10 ಜನರನ್ನು ಸಂಪರ್ಕಿಸಿದರು ಮತ್ತು ಆ ಮೂಲಕ ವಿವಾದವನ್ನು ಹೆಚ್ಚಿಸಿದರು. ಈ ಸಂಸ್ಥೆಯು ಪತ್ರಿಕೋದ್ಯಮಕ್ಕಿಂತ ಪ್ರಚಾರದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ತನ್ನ ಟೀಕೆಯನ್ನು ಮುಂದುವರಿಸಿದ ಝುಬೈರ್, ಶಮಿ ವಿರುದ್ಧದ ಫತ್ವಾ ಮತ್ತು ಶಹಾಬುದ್ದೀನ್ ನೀಡಿದ ಹೇಳಿಕೆಗಳ ಕುರಿತು ವೀಡಿಯೊ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲು ಅದಾನಿ ಒಡೆತನದ ಸುದ್ದಿ ಸಂಸ್ಥೆ ತನ್ನ ವರದಿಗಾರರನ್ನು ಕನಿಷ್ಠ 16 ಜನರ ಬಳಿ ಕಳುಹಿಸಿದೆ. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ಮುಹಮ್ಮದ್ ಶಮಿ ಅವರ ಬಗ್ಗೆ ವಿವಾದವನ್ನು ಸೃಷ್ಟಿಸಲು ಕೆಲವು ಮಾಧ್ಯಮಗಳು ಶ್ರಮಿಸಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News