×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ | ಈಡಿ ಮುಂದೆ ಹಾಜರಾದ ನಟಿ ಲಕ್ಷ್ಮೀ ಮಾಂಚು

Update: 2025-08-13 20:55 IST

 ನಟಿ ಲಕ್ಷ್ಮೀ ಮಾಂಚು |PC : ANI

ಹೈದರಾಬಾದ್, ಆ. 13: ನಿಗದಿತ ವೇದಿಕೆಗಳಲ್ಲಿ ಕಾನೂನು ಬಾಹಿರ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ತೆಲುಗು ನಟಿ ಲಕ್ಷ್ಮೀ ಮಾಂಚು ಬುಧವಾರ ಇಲ್ಲಿನ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.

ಅವರು ಜಾರಿ ನಿರ್ದೇಶನಾಲಯದ ಇಲ್ಲಿರುವ ವಲಯ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಹಾಜರಾದರು.

ಈ ಪ್ರಕರಣದ ವಿಚಾರಣೆಗೆ ಇಲ್ಲಿನ ತನ್ನ ವಲಯ ಕಚೇರಿಯಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಹಾಜರಾಗುವಂತೆ ಸೂಚಿಸಿ ನಾಲ್ವರು ನಟರಾದ ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಹಾಗೂ ಲಕ್ಷ್ಮೀ ಮಾಂಚುಗೆ ಜಾರಿ ನಿರ್ದೇಶನಾಲಯ ಕಳೆದ ತಿಂಗಳು ಸಮನ್ಸ್ ಜಾರಿ ಮಾಡಿತ್ತು.

ಪ್ರಕಾಶ್ ರಾಜ್, ದೇವರಕೊಂಡ ಹಾಗೂ ದಗ್ಗುಬಾಟಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಈ ಮೂವರು ನಟರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಿಕೊಂಡಿದೆ.

ಈ ನಟರು, ಇತರ ಹಲವು ಸೆಲಬ್ರಿಟಿಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸಲು ಐದಕ್ಕೂ ಅಧಿಕ ರಾಜ್ಯಗಳ ಪೊಲೀಸ್ ಎಫ್‌ಐಆರ್‌ಗಳನ್ನು ಜಾರಿ ನಿರ್ದೇಶನಾಲಯ ಗಮನಕ್ಕೆ ತೆಗೆದುಕೊಂಡಿದೆ.

ಈ ವ್ಯಕ್ತಿಗಳು ಶುಲ್ಕ ಪಡೆದುಕೊಂಡು ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಅನ್ನು ಪ್ರಚಾರ ಮಾಡಿರುವುದಾಗಿ ಶಂಕಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News