ಹೆಚ್ಚಿನ ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಮತದಾರರು ಎಸ್‌ಐಆರ್‌ನಲ್ಲಿ ಯಾವುದೇ ದಾಖಲೆ ಸಲ್ಲಿಸಬೇಕಿಲ್ಲ: ಚುನಾವಣಾ ಆಯೋಗದ ಅಧಿಕಾರಿಗಳು
Photo credit: PTI
ಹೊಸದಿಲ್ಲಿ: ಹೆಚ್ಚಿನ ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಮತದಾರರು ತಮ್ಮ ರಾಜ್ಯಗಳಲ್ಲಿ ಹಿಂದಿನ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲ್ಪಟ್ಟಿರುವುದರಿಂದ ಅವರು ಮುಂಬರುವ ಎಸ್‌ಐಆರ್‌ನಲ್ಲಿ ಯಾವುದೇ ದಾಖಲೆಯನ್ನು ಸಲ್ಲಿಸುವುದು ಅಗತ್ಯವಾಗದಿರಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಬುಧವಾರ ತಿಳಿಸಿದರು.
ಹೆಚ್ಚಿನ ರಾಜ್ಯಗಳಲ್ಲಿ ಹಿಂದಿನ ಎಸ್‌ಐಆರ್ 2002 ಮತ್ತು 2004ರ ನಡುವೆ ನಡೆದಿದ್ದು,ಮುಂದಿನ ಎಸ್‌ಐಆರ್‌ಗಾಗಿ ಆ ವರ್ಷವನ್ನು ಅವರ ಕಟ್‌ಆಫ್ ದಿನಾಂಕವನ್ನಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
ದೇಶಾದ್ಯಂತ ಎಸ್‌ಐಆರ್ ಆರಂಭಿಸಲು ದಿನಾಂಕವನ್ನು ಚುನಾವಣಾ ಆಯೋಗವು ಶೀಘ್ರವೇ ನಿರ್ಧರಿಸಲಿದೆ ಮತ್ತು ರಾಜ್ಯಗಳಾದ್ಯಂತ ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆಯು ವರ್ಷಾಂತ್ಯದಲ್ಲಿ ನಡೆಯಬಹುದು ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಹಿಂದಿನ ಎಸ್‌ಐಆರ್ ಬಳಿಕ ಪ್ರಕಟಿಸಲಾಗಿದ್ದ ತಮ್ಮ ರಾಜ್ಯಗಳ ಮತದಾರರ ಪಟ್ಟಿಗಳನ್ನು ಸಿದ್ಧವಾಗಿರಿಸುವಂತೆ ಚುನಾವಣಾ ಆಯೋಗವು ಮುಖ್ಯ ಚುನಾವಣಾಧಿಕಾರಿ(ಸಿಇಒ)ಗಳಿಗೆ ತಿಳಿಸಿದೆ. ಕೆಲವು ರಾಜ್ಯಗಳ ಸಿಇಒಗಳು ಈಗಾಗಲೇ ಈ ಪಟ್ಟಿಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ದಿಲ್ಲಿ ಸಿಇಒ ವೆಬ್‌ಸೈಟ್ ಹಿಂದಿನ ಸಲ ಎಸ್‌ಐಆರ್ ನಡೆದಿದ್ದ 2008ರ ಮತದಾರರ ಪಟ್ಟಿಗಳನ್ನು ಒಳಗೊಂಡಿದೆ.
ಉತ್ತರಾಖಂಡದಲ್ಲಿ 2006ರಲ್ಲಿ ಹಿಂದಿನ ಎಸ್‌ಐಆರ್ ನಡೆದಿದ್ದು, ರಾಜ್ಯ ಸಿಇಒ ವೆಬ್‌ಸೈಟ್ ಆ ವರ್ಷದಲ್ಲಿ ಪ್ರಕಟಗೊಂಡಿದ್ದ ಮತದಾರರ ಪಟ್ಟಿಗಳನ್ನು ಹೊಂದಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ ತೀವ್ರ ಪರಿಷ್ಕರಣೆಗಾಗಿ 2003ರ ಮತದಾರರ ಪಟ್ಟಿಗಳನ್ನು ಬಳಸಿರುವಂತೆ,ರಾಜ್ಯಗಳಲ್ಲಿ ಹಿಂದಿನ ಎಸ್‌ಐಆರ್ ನಡೆದಿದ್ದ ವರ್ಷಗಳು ಕಟ್‌ಆಫ್ ದಿನಾಂಕಗಳಾಗಲಿವೆ.
ಚುನಾವಣಾ ಆಯೋಗವು ಬಿಹಾರದ ಸಿಇಒಗೆ ನೀಡಿದ್ದ ಸೂಚನೆಗಳ ಪ್ರಕಾರ 2003ರ ಎಸ್‌ಐಆರ್‌ನಲ್ಲಿ ಪಟ್ಟಿಗಳಲ್ಲಿ ಸೇರಿಸಲಾಗಿದ್ದ 4.96 ಕೋಟಿ ಮತದಾರರು(ಒಟ್ಟು ಮತದಾರರ ಶೇ.60) ಪರಿಷ್ಕರಣೆಯ ಬಳಿಕ ಪ್ರಕಟಗೊಂಡಿದ್ದ ಮತದಾರರ ಪಟ್ಟಿಯ ಸಂಬಂಧಿತ ಭಾಗವನ್ನು ಹೊರತುಪಡಿಸಿ ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಗೊಳಿಸಲು ಯಾವುದೇ ಪೂರಕ ದಾಖಲೆಯನ್ನು ಸಲ್ಲಿಸುವ ಅಗತ್ಯವಿಲ್ಲ. ಉಳಿದ ಮೂರು ಕೋಟಿ ಮತದಾರರು(ಸುಮಾರು ಶೇ.40) ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಗೊಳಿಸಲು ಪಟ್ಟಿ ಮಾಡಲಾಗಿರುವ 12 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ.
ಮತದಾರರಾಗಲು ಅಥವಾ ರಾಜ್ಯದಿಂದ ಹೊರಗೆ ಸ್ಥಳಾಂತರಗೊಳ್ಳಲು ಬಯಸುವ ಅರ್ಜಿದಾರರು ಹೆಚ್ಚುವರಿ ಘೋಷಣಾ ನಮೂನೆಯಲ್ಲಿ ಸಲ್ಲಿಸಬೇಕಾಗುತ್ತದೆ. ಅವರು ತಾವು ಜು.1,1987ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದ್ದೇವೆ ಎಂದು ಪ್ರಮಾಣೀಕರಿಸಬೇಕಾಗುತ್ತದೆ ಮತ್ತು ತಮ್ಮ ಜನ್ಮದಿನಾಂಕ ಮತ್ತು/ಅಥವಾ ಜನ್ಮಸ್ಥಳವನ್ನು ಸಾಬೀತುಗೊಳಿಸಲು ಯಾವುದೇ ದಾಖಲೆಯನ್ನು ಒದಗಿಸಬೇಕಾಗುತ್ತದೆ.
ತಾವು ಜು.1,1987 ಮತ್ತು ಡಿ.2,2004ರ ನಡುವೆ ಭಾರತದಲ್ಲಿ ಜನಿಸಿದ್ದೇವೆ ಎನ್ನುವುದು ಘೋಷಣಾ ನಮೂನೆಯಲ್ಲಿ ಪಟ್ಟಿ ಮಾಡಲಾಗಿರುವ ಆಯ್ಕೆಗಳಲ್ಲಿ ಒಂದಾಗಿದೆ. ಅಂತಹವರು ತಮ್ಮ ಪೋಷಕರ ಜನ್ಮದಿನಾಂಕ/ಸ್ಥಳದ ದಾಖಲೆಗಳನ್ನು ಸಹ ಸಲ್ಲಿಸಬೇಕಾಗುತ್ತದೆ.