ಕರ್ನಲ್ ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆ: ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ದಾಖಲಿಸಿರುವ ಎಫ್ಐಆರ್ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಅತೃಪ್ತಿ
ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ (Photo credit: ANI)
ಹೊಸದಿಲ್ಲಿ : ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತ ಹೇಳಿಕೆಗೆ ಸಂಬಂಧಿಸಿ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ರಾಜ್ಯ ಸರಕಾರ ದಾಖಲಿಸಿರುವ ಎಫ್ಐಆರ್‌ಗೆ ಮಧ್ಯಪ್ರದೇಶ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.
ಕರ್ನಲ್ ಸೋಫಿಯಾ ಖುರೇಷಿ ಅವರನ್ನು ʼಭಯೋತ್ಪಾದಕರ ಸಹೋದರಿʼ ಎಂದು ಕರೆದ ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧದ ಪೊಲೀಸರ ತನಿಖೆಯನ್ನು ಮೇಲ್ವಿಚಾರಣೆ ಮಾಡುವುದಾಗಿಯೂ ಹೈಕೋರ್ಟ್ ಹೇಳಿದೆ.
ರಾಜ್ಯ ಬಿಜೆಪಿ ಸಚಿವರ ಹೇಳಿಕೆಯನ್ನು ಅವಮಾನಕರ, ಅಪಾಯಕಾರಿ ಎಂದು ಬಣ್ಣಿಸಿ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಬಿಜೆಪಿ ಸಚಿವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವಾರು ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತ್ತು.
ಬಿಎನ್ಎಸ್ ಸೆಕ್ಷನ್ 152 (ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು), 196(1)(ಬಿ) (ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 197(ಎ)(ಸಿ) (ಮಾತಿನ ಮೂಲಕ ಮಹಿಳೆಯ ನಮ್ರತೆಯನ್ನು ಅವಮಾನಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲು ಸೂಚಿಸಿತ್ತು.
ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ʼಭಯೋತ್ಪಾದಕರ ಸಹೋದರಿʼ ಕರೆದಿದ್ದರು. ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.