×
Ad

ಮರಾಠಿ ದಂಪತಿಗೆ ಹಿಂದಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿದ ಟಿಟಿಇ : ಮರಾಠಿ ಸಂಘಟನೆಗಳಿಂದ ಆಕ್ರೋಶ

Update: 2024-11-05 19:12 IST

PC : X 

ಮುಂಬೈ : ಮರಾಠಿ ದಂಪತಿಗೆ ಹಿಂದಿಯಲ್ಲಿ ಮಾತನಾಡುವಂತೆ ಬಲವಂತ ಮಾಡಿ ಬಳಿಕ ಅವರನ್ನು ಬಂಧಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಪಶ್ಚಿಮ ರೈಲ್ವೆಯ ಟಿಕೆಟ್ ಕಲೆಕ್ಟರ್ ನನ್ನು ಅಮಾನತುಗೊಳಿಸಲಾಗಿದೆ.

ನಲಸೋಪಾರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮರಾಠಿ ಏಕೀಕರಣ ಸಮಿತಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದೆ. ʼನಾವು ಎಂದಿಗೂ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸುವುದಿಲ್ಲ’ ಎಂದು ಪೇಪರ್ ನಲ್ಲಿ ಬರೆಯುವಂತೆ ದಂಪತಿಗೆ ಟಿಟಿಇ ಬಲವಂತ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ರೈಲ್ವೆ ವಕ್ತಾರರು, ಟಿಟಿಇಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಮತ್ತು ಸೂಕ್ತ ತನಿಖೆಯ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಟಿಟಿಇ ರಾಕೇಶ್ ಮೌರ್ಯ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹಿಸಿದ್ದು, ನೀವು ಭಾರತೀಯರಾಗಿದ್ದರೆ, ನಿಮಗೆ ಹಿಂದಿ ತಿಳಿದಿರಬೇಕು ಎಂದು ಪಾಠ ಮಾಡಿದ್ದಾನೆ ಎನ್ನಲಾಗಿದೆ. “ಮರಾಠಿಯಲ್ಲಿ ಮಾತನಾಡಲು ಎಂದಿಗೂ ಒತ್ತಾಯಿಸುವುದಿಲ್ಲ” ಎಂದು ಕೂಡ ಕಾಗದದ ಮೇಲೆ ಬರೆಯುವಂತೆ ಸೂಚಿಸಲಾಗಿದೆ.

ಘಟನೆಯನ್ನು ಮಹಿಳೆ ತನ್ನ ಪೋನ್ ನಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ವಿಡಿಯೋ ಡಿಲಿಟ್ ಮಾಡುವಂತೆ ಅವರಿಗೆ ಆಗ್ರಹಿಸಲಾಗಿದೆ. ಇದಲ್ಲದೆ ದಂಪತಿಯನ್ನು ದೀರ್ಘ ಸಮಯದವರೆಗೆ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ, ನಂತರ ಅವರನ್ನು ಬಂಧಿಸಲಾಗಿದೆ ಎಂದು ಮರಾಠಿ ಏಕೀಕರಣ ಸಮಿತಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ರೈಲ್ವೆ ಅಧಿಕಾರಿಗಳು, ನಮಗೆ ಎಲ್ಲಾ ಧರ್ಮ, ಭಾಷೆ, ಪ್ರದೇಶಗಳ ಪ್ರಯಾಣಿಕರು ಸಮಾನರು ಮತ್ತು ಎಲ್ಲರಿಗೂ ಉತ್ತಮ ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಈ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News