×
Ad

ಮುಂಬೈ ಶೇರು ವಿನಿಮಯ ಕಚೇರಿಗೆ ಬಾಂಬ್ ಬೆದರಿಕೆ

Update: 2025-07-15 20:56 IST

PC : PTI 

ಮುಂಬೈ: ದಕ್ಷಿಣ ಮುಂಬೈಯಲ್ಲಿರುವ ಬಾಂಬೆ ಶೇರು ವಿನಿಮಯ (ಬಿಎಸ್‌ಇ) ಕಚೇರಿ ಬಾಂಬ್ ಬೆದರಿಕೆಯ ಈ ಮೇಲ್ ಸ್ವೀಕರಿಸಿದೆ. ಆದರೆ, ಕಚೇರಿಯ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಅದು ಹುಸಿ ಬಾಂಬ್ ಕರೆ ಎಂಬುದು ತಿಳಿದು ಬಂತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ದಕ್ಷಿಣ ಭಾರತದ ರಾಜಕೀಯ ನಾಯಕರೊಬ್ಬರ ಹೆಸರನ್ನು ಉಲ್ಲೇಖಿಸಿದ ಇಮೇಲ್ ಐಡಿಯಿಂದ ಬಿಎಸ್‌ಇಯ ಉದ್ಯೋಗಿಯೊಬ್ಬರು ರವಿವಾರ ಇಮೇಲ್ ಸ್ವೀಕರಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಇಮೇಲ್‌ನಲ್ಲಿ ಬಿಎಸ್‌ಇ ಕಚೇರಿಯಲ್ಲಿ ನಾಲ್ಕು ಆರ್‌ಡಿಎಕ್ಸ್ ಐಇಡಿಗಳನ್ನು ಇರಿಸಲಾಗಿದೆ ಎಂದು ಪ್ರತಿಪಾದಿಸಲಾಗಿತ್ತು. ಸೋಮವಾರ ಅಪರಾಹ್ನ 3 ಗಂಟೆಗೆ ಸ್ಫೋಟ ಸಂಭವಿಸಲಿದೆ ಎಂದು ಅದು ಎಚ್ಚರಿಸಿತ್ತು ಎಂದು ಅವರು ಹೇಳಿದ್ದಾರೆ.

ಬಿಎಸ್‌ಇ ಉದ್ಯೋಗಿ ಶೇರು ವಿನಿಮಯ ಕಚೇರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಮುಂಬೈ ಪೊಲೀಸರನ್ನು ಸಂಪರ್ಕಿಸಿದರು.

ಮುಂಬೈ ಪೊಲೀಸ್‌ನ ತಂಡ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (ಬಿಡಿಡಿಎಸ್) ಬಿಎಸ್‌ಇ ಕಚೇರಿಗೆ ಧಾವಿಸಿತು ಹಾಗೂ ಶೋಧ ಕಾರ್ಯಾಚರಣೆ ನಡೆಸಿತು. ಆದರೆ, ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಇಮೇಲ್ ಕಳುಹಿಸಿದವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News