×
Ad

ಮುಂಬೈ; ಕಾರಿಗೆ ಢಿಕ್ಕಿ ಹೊಡೆದ ಬಳಿಕ ಚಾಲಕನನ್ನು ಎಳೆದೊಯ್ದು ಛಿದ್ರವಿಚ್ಛಿದ್ರಗೊಳಿಸಿದ ಟ್ಯಾಂಕರ್

Update: 2023-09-10 21:35 IST

ಸಾಂದರ್ಭಿಕ ಚಿತ್ರ

ಮುಂಬೈ: ಟ್ಯಾಂಕರೊಂದು ಕಾರಿಗೆ ಢಿಕ್ಕಿ ಹೊಡೆದ ಮತ್ತು ಅದರ ಚಾಲಕನನ್ನು ಸ್ವಲ್ಪ ದೂರ ಎಳೆದೊಯ್ದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಶನಿವಾರ ಅಪರಾಹ್ನ ನವಿ ಮುಂಬೈನ ಮುಂಬೈ-ಗೋವಾ ಹೆದ್ದಾರಿಯಲ್ಲಿ ತಾರಾ ಗ್ರಾಮದ ಸೇತುವೆ ಬಳಿ ಈ ದುರಂತ ಸಂಭವಿಸಿದೆ. ಮೃತ ವ್ಯಕ್ತಿಯನ್ನು ನೆರೆಯ ರಾಯಗಡ ಜಿಲ್ಲೆಯ ಖಾಲಾಪುರ ನಿವಾಸಿ ಶ್ರೀಕಾಂತ ಮೋರೆ (60) ಎಂದು ಗುರುತಿಸಲಾಗಿದೆ.

ಮೋರೆ ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್ ಹಿಂದಿನಿಂದ ಅವರ ಕಾರಿಗೆ ಢಿಕ್ಕಿ ಹೊಡೆದಿತ್ತು. ಕಾರಿಗೆ ಏನಾಗಿದೆ ಎಂದು ಪರಿಶೀಲಿಸಲು ಕೆಳಗಿಳಿದಿದ್ದ ಮೋರೆ ಟ್ಯಾಂಕರ್ ಚಾಲಕನೊಂದಿಗೆ ಮಾತನಾಡುತ್ತಿದ್ದಾಗಲೇ ಆತ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದ. ಮೋರೆ ಟ್ಯಾಂಕರ್ ನೊಂಗೆ ಕೆಲವು ದೂರ ಎಳೆದೊಯ್ಯಲ್ಪಟ್ಟಿದ್ದು, ಬಳಿಕ ಚಾಲಕ ಅವರನ್ನು ರಸ್ತೆಗೆ ತಳ್ಳಿದ್ದ.

ಟ್ಯಾಂಕರ್ ನ ಚಕ್ರದಡಿ ಸಿಲುಕಿದ ಮೋರೆಯವರ ದೇಹ ಛಿದ್ರವಿಚ್ಛಿದ್ರಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪನವೇಲ್ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ತಿಳಿಸಿದರು.

ಮೋರೆಯವರ ಪತ್ನಿಯವರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಗುರುತಿಸಲಾಗಿದ್ದು ಆತನನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News