×
Ad

"ಪ್ರಜಾಪ್ರಭುತ್ವದ ಕಗ್ಗೊಲೆ": ವಿವಾದಿತ ಚಂಡೀಗಢ ಮೇಯರ್‌ ಚುನಾವಣೆ ಕುರಿತು ಸಿಜೆಐ

Update: 2024-02-05 17:00 IST

Photo: NDTV

ಹೊಸದಿಲ್ಲಿ: “ಇದು ಪ್ರಜಾಪ್ರಭುತ್ವದ ಅಪಹಾಸ್ಯ, ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ, ನಮಗೆ ಆಘಾತವಾಗಿದೆ.” ವಿವಾದಿತ ಚಂಡೀಗಢ ಮೇಯರ್‌ ಚುನಾವಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂತ್ರಿ ಡಿ ವೈ ಚಂದ್ರಚೂಡ್‌ ತಮ್ಮ ಅಸಮಾಧಾನವನ್ನು ಮೇಲಿನ ಮಾತುಗಳ ಮೂಲಕ ತೋರ್ಪಡಿಸಿಕೊಂಡರು.

ಆಪ್‌ ಕೌನ್ಸಿಲರ್‌ ಕುಲದೀಪ್‌ ಕುಮಾರ್‌ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಇಂದು ವಿಚಾರಣೆ ನಡೆಸಿದೆ.

ನಿವೃತ್ತ ನ್ಯಾಯಮೂರ್ತಿಯೊಬ್ಬರ ಮೇಲ್ವಿಚಾರಣೆಯಲ್ಲಿ ಮೇಯರ್‌ ಚುನಾವಣೆಯನ್ನು ಹೊಸದಾಗಿ ನಡೆಸಬೇಕೆಂದು ಕೋರಿ ಕುಲದೀಪ್‌ ಕುಮಾರ್‌ ಈ ಹಿಂದೆ ಅರ್ಜಿ ಸಲ್ಲಿಸಿದ್ದರು.

ಇಂದಿನ ವಿಚಾರಣೆ ವೇಳೆ ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದೆಯಲ್ಲದೆ ಅವರು ಮತ ಪತ್ರಗಳಲ್ಲಿ ಗೀಚಿದ್ದಾರೆಂದು ತಿಳಿಯುತ್ತದೆ ಎಂದು ಹೇಳಿದೆ.

“ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರೇಕೆ ಕ್ಯಾಮೆರಾ ನೋಡುತ್ತಿದ್ದರು? ಸಾಲಿಸಿಟರ್‌ ಅವರೇ ಇದು ಪ್ರಜಾಪ್ರಭುತ್ವದ ಅಪಹಾಸ್ಯ, ಕಗ್ಗೊಲೆ,” ಎಂದು ಸಿಜೆಐ ಹೇಳಿದರು.

“ರಿಟರ್ನಿಂಗ್‌ ಆಫೀಸರ್‌ ಈ ರೀತಿ ವರ್ತಿಸಬಹುದೇ? ಮತ ಪತ್ರದ ಕೆಳಭಾಗದಲ್ಲಿ ಕ್ರಾಸ್‌ ಚಿಹ್ನೆ ಇರುವಲ್ಲಿ ಅವರು ಮುಟ್ಟುವುದಿಲ್ಲ, ಮೇಲ್ಭಾಗದಲ್ಲಿರುವಾಗ ಬದಲಾಯಿಸುತ್ತಾರೆ. ಸುಪ್ರೀಂ ಕೋರ್ಟ್‌ ಅವರನ್ನು ಗಮನಿಸುತ್ತಿದೆ ಎಂದು ರಿಟರ್ನಿಂಗ್‌ ಆಫೀಸರ್‌ಗೆ ಹೇಳಿ,” ಎಂದು ಸಿಜೆಐ ಹೇಳಿದರು.

ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಎಂಟು ಮತಗಳನ್ನು ಚುನಾವಣಾಧಿಕಾರಿ ಅಮಾನ್ಯಗೊಳಿಸಿದ ನಂತರ ಬಿಜೆಪಿಗೆ 16 ಮತಗಳು ಹಾಗೂ ಆಪ್‌, ಕಾಂಗ್ರೆಸ್‌ ಮೈತ್ರಿಕೂಟಕ್ಕೆ 12 ಮತಗಳು ದೊರೆತು ಬಿಜೆಪಿಯ ಮನೋಜ್‌ ಸೋಂಕರ್‌ ಅವರನ್ನು ಮೇಯರ್‌ ಆಗಿ ಆಯ್ಕೆಗೊಳಿಸಿದ್ದು ಭಾರೀ ವಿವಾದಕ್ಕೀಡಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News