ಮುರ್ಷಿದಾಬಾದ್ ಗಲಭೆ: ಅವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಂಧನ
ಕೋಲ್ಕತಾ: ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಹಾಗೂ ಆತನ ಪುತ್ರನನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ನಾಲ್ಕಕ್ಕೇರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಫ್ರಾಬಾದ್ನ ನೆರೆಹೊರೆಯ ಗ್ರಾಮವಾದ ಸುಲಿತಾಲಾ ಪೂರಬ್ಪಾರದ ನಿವಾಸಿಯಾದ ಝಿಯಾವುಲ್ ಶೇಖ್ ಎಪ್ರಿಲ್ 12ರಂದು ಅಪರಾಧ ಕೃತ್ಯವನ್ನು ಎಸಗಿದ ನಂತರ ತಲೆಮರೆಸಿಕೊಂಡಿದ್ದನು. ಝಿಯಾವುಲ್ ಶೇೇಖ್ ನನ್ನು ಉತ್ತರ ದಿನಾಜ್ಪುರ ಜಿಲ್ಲೆಯ ಚೋಪ್ರಾದಲ್ಲಿರುವ ಅಡಗುದಾಣವೊಂದರಿಂದ ಪಶ್ಚಿಮಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆಯು ವಿಶೇಷ ತನಿಖಾ ತಂಡದ ನೆರವಿನೊಂದಿಗೆ ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಈ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಲು ನಾದಾರ್ ಹಾಗೂ ದಿಲ್ದಾರ್ ಎಂಬ ಇಬ್ಬರು ಸೋದರರು ಹಾಗೂ ಇಂಝಮಾಮ್ ಉಲ್ ಹಕ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.