ಭ್ರಷ್ಟಾಚಾರ ನಿರ್ಮೂಲನೆ ಮಾಡಲು 500 ರೂ.ಮುಖಬೆಲೆಯ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು
Photo: PTI
ಹೊಸದಿಲ್ಲಿ: “ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಅಧಿಕ ಮುಖಬೆಲೆ ಹೊಂದಿರುವ ನೋಟುಗಳ ಚಲಾವಣೆಯನ್ನು ಹಿಂಪಡೆಯಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ” ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
“ಎಲ್ಲ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು” ಎಂದು India Today TVಗೆ ನೀಡಿರುವ ಸಂದರ್ಶನದಲ್ಲಿ ಅವರು ಅಭಿಪ್ರಾಯ ಪಟ್ಟಿೊದ್ದಾರೆ.
ರೂ. 500 ಮುಖಬೆಲೆಯ ನೋಟುಗಳನ್ನೂ ಚಲಾವಣೆಯಿಂದ ಹಿಂಪಡೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
“ಕೇವಲ 100 ರೂ. ಹಾಗೂ 200 ರೂ. ಕೆಳಗಿನ ಮುಖಬೆಲೆಯ ನೋಟುಗಳು ಮಾತ್ರ ಇರಬೇಕು. 500 ರೂ. ಮುಖಬೆಲೆಯ ನೋಟುಗಳನ್ನೂ ಚಲಾವಣೆಯಿಂದ ಹಿಂಪಡೆಯಬೇಕು” ಎಂದು ಅವರು ಹೇಳಿದ್ದಾರೆ.
“ಎಲ್ಲ ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು. ಅದು ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಸಾಧ್ಯ” ಎಂದೂ ಅವರು ಹೇಳಿದ್ದಾರೆ.
ನವೆಂಬರ್ 8, 2016ರಂದು ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಹಿಂದಿನ 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಅದರ ಬದಲಿಗೆ, ಹೊಸದಾಗಿ 200 ರೂ., 500 ರೂ. ಹಾಗೂ 2,000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು.