×
Ad

ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದೆ, ಆದರೆ ಅವರೆಂದೂ ಉತ್ತರಿಸಲಿಲ್ಲ: ಮಣಿಶಂಕರ್ ಅಯ್ಯರ್

Update: 2024-12-15 19:52 IST

ಮಣಿಶಂಕರ್ ಅಯ್ಯರ್ | PC  :PTI 

ಹೊಸದಿಲ್ಲಿ: ಪಕ್ಷದೊಳಗೆ ತನ್ನ ಬೆಳವಣಿಗೆಯಲ್ಲಿ ಮತ್ತು ನಂತರ ತನ್ನನ್ನು ಮೂಲೆಗುಂಪು ಮಾಡಿದ್ದರಲ್ಲಿ ಗಾಂಧಿ ಕುಟುಂಬದ ಪಾತ್ರವಿತ್ತು ಎಂದು ಪ್ರತಿಪಾದಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರು,ತನ್ನ ರಾಜಕೀಯ ವೃತ್ತಿಜೀವನವನ್ನು ಗಾಂಧಿಗಳು ರೂಪಿಸಿದ್ದರು ಮತ್ತು ಅವರೇ ತನ್ನನ್ನು ರಾಜಕೀಯದಿಂದ ದೂರವಿರಿಸಿದ್ದರು ಎನ್ನುವುದು ತನ್ನ ಜೀವನದಲ್ಲಿಯ ವ್ಯಂಗ್ಯವಾಗಿದೆ ಎಂದು ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ 83ರ ಹರೆಯದ ಅಯ್ಯರ್, ವರ್ಷಗಳಿಂದಲೂ ಗಾಂಧಿ ಕುಟುಂಬದ ಪ್ರಮುಖ ಸದಸ್ಯರು ತನ್ನೊಂದಿಗೆ ನೇರವಾಗಿ ತೊಡಗಿಸಿಕೊಂಡಿಲ್ಲ. ಕಳೆದ 10 ವರ್ಷಗಳಲ್ಲಿ ಸೋನಿಯಾ ಗಾಂಧಿಯವರನ್ನು ಮುಖಾಮುಖಿ ಭೇಟಿಯಾಗಲು ಒಂದೇ ಒಂದು ಅವಕಾಶವನ್ನು ನನಗೆ ನೀಡಲಾಗಿಲ್ಲ. ಒಂದು ಸಂದರ್ಭವನ್ನು ಹೊರತುಪಡಿಸಿ ರಾಹುಲ್ ಗಾಂಧಿಯವರೊಂದಿಗೆ ಯಾವುದೇ ಅರ್ಥಪೂರ್ಣ ಸಮಯವನ್ನು ಕಳೆಯುವ ಅವಕಾಶ ನನಗೆ ಲಭ್ಯವಾಗಲಿಲ್ಲ. ಎರಡು ಸಂದರ್ಭಗಳನ್ನು ಹೊರತುಪಡಿಸಿ ಪ್ರಿಯಾಂಕಾ ಗಾಂಧಿವರೊಂದಿಗೆ ಭೇಟಿಯಿಂದಲೂ ನಾನು ವಂಚಿತನಾಗಿದ್ದೇನೆ. ಪ್ರಿಯಾಂಕಾ ಸಾಂದರ್ಭಿಕವಾಗಿ ತನಗೆ ದೂರವಾಣಿ ಕರೆಗಳನ್ನು ಮಾಡಿದ್ದಾರೆ ಮತ್ತು ಇದು ಕೊಂಚ ಮಟ್ಟದಲ್ಲಿ ಸಂಪರ್ಕವನ್ನು ಜೀವಂತವಾಗಿರಿಸಿದೆ ಎಂದು ಹೇಳಿದರು.

ಒಂದು ನಿರ್ದಿಷ್ಟ ಘಟನೆಯನ್ನು ನೆನಪಿಸಿಕೊಂಡ ಅಯ್ಯರ್, ನಾನು ಪಕ್ಷದಿಂದ ಅಮಾನತುಗೊಂಡಿದ್ದ ಅವಧಿಯಲ್ಲಿ ರಾಹುಲ್ ಗಾಂಧಿಯವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಪ್ರಿಯಾಂಕಾರನ್ನು ಅವಲಂಬಿಸಬೇಕಾಗಿತ್ತು ಎಂದರು.

’ನಾನು ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗುವ ಸಂದರ್ಭ ಒದಗಿತ್ತು ಮತ್ತು ಆಕೆ ಸದಾ ನನ್ನ ಬಗ್ಗೆ ಅನುಕಂಪವನ್ನು ಹೊಂದಿದ್ದಾರೆ. ಜೂನ್‌ನಲ್ಲಿ ರಾಹುಲ್ ಜನ್ಮದಿನ ಇತ್ತು, ಹೀಗಾಗಿ ಅವರಿಗೆ ನನ್ನ ಶುಭಾಶಯಗಳನ್ನು ತಲುಪಿಸುವಂತೆ ಪ್ರಿಯಾಂಕಾರನ್ನು ಕೇಳಿಕೊಳ್ಳಬಹುದು ಎಂದು ನಾನು ಭಾವಿಸಿದ್ದೆ. ನೀವೇಕೆ ರಾಹುಲ್ ಜೊತೆ ನೇರವಾಗಿ ಮಾತನಾಡುವುದಿಲ್ಲ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದರು. ನಾನು ಪಕ್ಷದಿಂದ ಅಮಾನತುಗೊಂಡಿದ್ದೇನೆ, ಹೀಗಾಗಿ ನಾನು ನನ್ನ ನಾಯಕನೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಅವರಿಗೆ ಉತ್ತರಿಸಿದ್ದೆ ’ ಎಂದು ಅಯ್ಯರ್ ಹೇಳಿದರು.

‘ನಾನು ರಾಹುಲ್ ಗಾಂಧಿಯವರಿಗೆ ಪತ್ರವೊಂದನ್ನು ಬರೆದಿದ್ದೆ. ಅದು ಹುಟ್ಟುಹಬ್ಬದ ಶುಭಾಯಗಳೊಂದಿಗೆ ಆರಂಭಗೊಂಡಿತ್ತು ಮತ್ತು ನಾನು ನನ್ನ ಅಮಾನತಿನ ಕುರಿತು ಸ್ಪಷ್ಟನೆಯನ್ನೂ ಕೋರಿದ್ದೆ,ಆದರೆ ಆ ಪತ್ರಕ್ಕೆ ರಾಹುಲ್‌ರಿಂದ ಪ್ರತಿಕ್ರಿಯೆಯನ್ನು ಎಂದಿಗೂ ನಾನು ಸ್ವೀಕರಿಸಲಿಲ್ಲ’ ಎಂದೂ ಅಯ್ಯರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News